ನವದೆಹಲಿ: ದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್-19 ಲಸಿಕೆ ಡೋಸ್ ಗಳ ಸಂಖ್ಯೆ 64 ಕೋಟಿ ಗಡಿ ದಾಟುವುದರೊಂದಿಗೆ ಲಸಿಕೆ ಅಭಿಯಾನದಲ್ಲಿ ದೇಶ ಮತ್ತೊಂದು ಮೈಲುಗಲ್ಲು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಈವರೆಗೂ 49 ಕೋಟಿ ಗೂ ಹೆಚ್ಚು ಡೋಸ್ ಮೊದಲ ಡೋಸ್ ಹಾಗೂ ಸುಮಾರು 14 ಕೋಟಿ ಡೋಸ್ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಈ ವರ್ಷದ ಜೂನ್ 21 ರಿಂದ ಹೊಸ ಹಂತದ ಕೋವಿಡ್-19 ಲಸಿಕಾ ಅಭಿಯಾನವನ್ನು ಆರಂಭಿಸಲಾಗಿತ್ತು.
ಸೋಮವಾರ ಸಂಜೆ 7 ಗಂಟೆಗೆ ಸಂಗ್ರಹಿಸಲಾದ ತಾತ್ಕಾಲಿಕ ವರದಿ ಪ್ರಕಾರ, ಸೋಮವಾರ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ( 53,37,042) ಡೋಸ್ ಲಸಿಕೆಯನ್ನು ನೀಡಲಾಗಿದೆ. ದಿನದ ಅಂತಿಮ ಲೆಕ್ಕಾಚಾರ ತಡರಾತ್ರಿ ವೇಳೆಗೆ ದೊರೆಯಲಿದೆ ಎಂದು ಸಚಿವಾಲಯ ಹೇಳಿದೆ.
ಕೋವಿಡ್-19 ನಿಂದ ದೇಶದ ಎಲ್ಲ ಜನರನ್ನು ರಕ್ಷಿಸುವ ಸಾಧನವಾಗಿ ಲಸಿಕೆ ಹಾಕುವಿಕೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.