ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತನಿಗೆ ಎರಡು ವರ್ಷಗಳಲ್ಲಿ ಆರನೇ ಬಾರಿ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಲೀಸ್ ಮೇಲೆ ಪಡೆದ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಉತ್ಕೃಷ್ಟ ದರ್ಜೆಯ 6.47 ಕ್ಯಾರಟ್ ತೂಗುವ ವಜ್ರ ದೊರೆತಿದೆ.
ರೈತ ಪ್ರಕಾಶ ಮಜುಂದಾರ್ ಅವರಿಗೆ ಜಿಲ್ಲೆಯ ಜಾರುಪುರ್ ಗ್ರಾಮದ ಗಣಿಯಲ್ಲಿ ಶುಕ್ರವಾರ ಈ ಅತ್ಯುತ್ತಮ ದರ್ಜೆಯ ವಜ್ರ ದೊರೆತಿದೆ ಎಂದು ಈ ಭಾಗದ ವಜ್ರ ಗಣಿಗಾರಿಕೆ ಉಸ್ತುವಾರಿ ಅಧಿಕಾರಿಯಾಗಿರುವ ನೂತನ್ ಜೈನ್ ತಿಳಿಸಿದ್ದಾರೆ.
ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕಿಡಲಾಗುವುದು. ಅಲ್ಲಿ ಸರ್ಕಾರದ ಮಾರ್ಗಗರ್ಶಿ ಸೂತ್ರಗಳ ಅನ್ವಯ ಇದರ ಬೆಲೆ ನಿರ್ಧಾರವಾಗಲಿದೆ ಎಂದು ನೂತನ್ ತಿಳಿಸಿದ್ದಾರೆ.
ಹರಾಜಿನಿಂದ ಬರುವ ಹಣದ ಪಾಲನ್ನು, ಗಣಿಗಾರಿಕೆಯಲ್ಲಿ ತೊಡಗಿದ ಇತರ ನಾಲ್ಕು ಮಂದಿ ಪಾಲುದಾರರ ಜೊತೆ ಹಂಚಿಕೊಳ್ಳುತ್ತೇನೆ ಎಂದು ಮಜುಂದಾರ್ ತಿಳಿಸಿದ್ದಾರೆ. 'ನಾವು ಐದು ಮಂದಿ ಪಾಲುದಾರರಿದ್ದೇವೆ. 6.47 ಕ್ಯಾರಟ್ ತೂಗುವ ಈ ವಜ್ರವನ್ನು ಸರ್ಕಾರದ ವಜ್ರ ಖಜಾನೆಯಲ್ಲಿ ಭದ್ರವಾಗಿಡಲಾಗಿದೆ' ಎಂದು ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವರ್ಷ ತಮಗೆ ಗಣಿಯಿಂದ 7.44 ಕ್ಯಾರಟ್ ವಜ್ರ ದೊರಕಿತ್ತು. ಇದರ ಜೊತೆಗೆ 2 ರಿಂದ 2.5 ಕ್ಯಾರಟ್ ತೂಕದ ವಜ್ರಗಳೂ ದೊರೆತಿವೆ ಎಂದು ಸಂಭ್ರಮದಿಂದ ಹೇಳಿದ್ದಾರೆ.
ಸರ್ಕಾರದ ರಾಜಧನ ಮತ್ತು ತೆರಿಗೆ ಕಳೆದು ಉಳಿದ ಹಣವನ್ನು ರೈತನಿಗೆ ನೀಡಲಾಗುವುದು. ಖಾಸಗಿ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ 6.47 ಕ್ಯಾರಟ್ ವಜ್ರಕ್ಕೆ ಹರಾಜಿನಲ್ಲಿ ಸುಮಾರು 30 ಲಕ್ಷ ಸಿಗುವುದು ಪಕ್ಕಾ.
ಪನ್ನಾದಲ್ಲಿ ವಜ್ರದ ಸಂಪತ್ತು ಹೇರಳವಾಗಿದ್ದು, ಸರ್ಕಾರ ಸಣ್ಣ ಸಣ್ಣ ಜಮೀನುಗಳನ್ನು ಭೋಗ್ಯದ ಮೇಲೆ ರೈತರಿಗೆ ನೀಡುತ್ತದೆ. ಅವರಿಗೆ ಗಣಿಗಾರಿಕೆ ವೇಳೆ ಸಿಗುವ ವಜ್ರವನ್ನು ಜಿಲ್ಲಾ ಗಣಿಗಾರಿಕೆ ಕಚೇರಿಯಲ್ಲಿ ಠೇವಣಿಯಾಗಿಡಲು ಅವಕಾಶವಿದೆ.