ನವದೆಹಲಿ: ರದ್ದಾದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗಳಿಗೆ ನೋಟಿಸ್ ನೀಡಿದೆ.
2015ರಲ್ಲಿ ಸುಪ್ರೀಂ ಕೋರ್ಟ್ ರದ್ದಗೊಳಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಜನರ ವಿರುದ್ಧ ಪ್ರಕರಣದಾಖಲಿಸಲಾಗುತ್ತಿದೆ ಎಂದು ಎನ್ ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಎಲ್ಲಾ ಹೈಕೋರ್ಟ್ ಗಳ ರಿಜಿಸ್ಟ್ರಾರ್ ಜನರಲ್ ಗೆ ನೋಟಿಸ್ ನೀಡಿದೆ.
ಪೊಲೀಸ್ ರಾಜ್ಯ ವಿಷಯವಾಗಿರುವುದರಿಂದ, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿವಾದಿಯಾಗಿ ಮಾಡುವುದು ಉತ್ತಮ ಮತ್ತು ಈ ಸಂಬಂಧ ನಾವು ಒಂದು ಸಮಗ್ರ ಆದೇಶವನ್ನು ಜಾರಿಗೊಳಿಸಬಹುದು. ಇದರಿಂದ ಪ್ರಕರಣ ಒಂದೇ ಬಾರಿಗೆ ಇತ್ಯರ್ಥವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್ ಮತ್ತು ಬಿಆರ್ ಗವಾಯಿ ಅವರ ನ್ಯಾಯಪೀಠ ಹೇಳಿದೆ.
ಎನ್ ಜಿಒ ಪಿಯುಸಿಎಲ್ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಪರಿಖ್ ಅವರು, ಈ ವಿಷಯದಲ್ಲಿ ಎರಡು ಅಂಶಗಳಿವೆ, ಒಂದು ಪೊಲೀಸ್ ಮತ್ತು ಇನ್ನೊಂದು ನ್ಯಾಯಾಂಗವಾಗಿದ್ದು, ಅಂತಹ ಪ್ರಕರಣಗಳನ್ನು ಇನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ, ಎಲ್ಲಾ ಹೈಕೋರ್ಟ್‌ಗಳಿಗೆ ನೋಟಿಸ್ ನೀಡುವುದಾಗಿ ಹೇಳಿದೆ.
ನಾಲ್ಕು ವಾರಗಳ ನಂತರ ಮುಂದಿನ ವಿಚಾರಣೆಗೆ ಸುಪ್ರೀಂ ಕೋರ್ಟ್ ಈ ವಿಷಯವನ್ನು ಪಟ್ಟಿ ಮಾಡಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅಡಿಯಲ್ಲಿ ಕೇಸ್ ದಾಖಲಿಸುವುದನ್ನು 2015 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ರದ್ದುಗೊಳಿಸಲಾಗಿದೆ.
ರದ್ದಾದ ಸೆಕ್ಷನ್ 66ಎ ಅಡಿಯಲ್ಲಿ, ಆಕ್ರಮಣಕಾರಿ ಸಂದೇಶಗಳನ್ನು ಪೋಸ್ಟ್ ಮಾಡುವ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಅವಕಾಶ ಇದೆ.