ಇಂದು ಭಾರತ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ನಿಜ ಹೇಳಬೇಕೆಂದರೆ ವರ್ಷದಿಂದ ವರ್ಷಕ್ಕೆ ಇದರ ಮಹತ್ವವೇ ಈಗ ಕಳೆಗುಂದುತಿದೆ. ನಮ್ಮಲ್ಲಿ ಆಪ್ತರು, ಆತ್ಮೀಯರು, ಸಂಬಂಧಿಗಳು ತೀರಿಹೋದಾಗ, ಮೊದಲ ಒಂದು ವರುಷ ತಿಂಗಳಿಗೊಮ್ಮೆ ತರ್ಪಣ ಕೊಡುತ್ತೇವೆ.....ಆಮೇಲೆ ವಷಾರ್ಂತಿಕವೆಂದು ಮಾಡಿ ಎಲ್ಲರೂ ಅವರ ಆತ್ಮ ಶಾಂತಿಗೋಸ್ಕರ ಪ್ರಾರ್ಥಿಸುತ್ತೇವೆ. ಇದೇ ರೀತಿಯಾಗಿಬಿಟ್ಟಿದೆ ಸ್ವಾತಂತ್ರೋತ್ಸವ ಇಂದು!! ಮಗು ಹುಟ್ಟಿದಾಗ, ಅದರ ಮೊದಲ ಜನ್ಮದಿನಾಚರಣೆಯ ಹಬ್ಬವನ್ನಾಚರಿಸಿ, ತದನಂತರವೇನೂ ನಾವು ಆ ದಿನದ ಸವಿ ನೆನಪನ್ನು ಮರೆಯೊಲ್ಲ ತಾನೇ? ಅದು ದೊಡ್ಡದಾಗಿ ಏನೇ ಆಗಿರಲಿ... ಒಳಿತನ್ನೇ ಮಾಡಲಿ, ನೋವನ್ನೇ ನೀಡಲಿ.... ಹೆತ್ತವರು ಮಾತ್ರ ತಮ್ಮ ಮಗುವಿನ ಜನ್ಮದಿನವನ್ನೆಂದೂ ಮರೆಯರು. ಆ ದಿನದ ಮಹತ್ವ ಅವರಿಗೆಂದೂ ನಿತ್ಯನೂತನವೇ ಸರಿ. ಹೀಗಿರುವಾಗ ದಾಸ್ಯದಿಂದ ಮುಕ್ತಿಸಿಕ್ಕಿ, ನಮ್ಮ ಬದುಕಿಗೆ, ವಿಚಾರಕ್ಕೆ, ಆಚಾರಕ್ಕೆ, ವ್ಯವಹಾರಕ್ಕೆ ಸ್ವಾತಂತ್ರ್ಯ ಸಿಕ್ಕ ಈ ದಿನ.. ಮಗುವಿನ ಜನ್ಮದಿನದ ಸಂಭ್ರಮವನ್ನು ಪಡೆಯುವ ಬದಲು, ತೀರಿಹೋದವರ ನೆನಪನ್ನು ಕ್ರಮೇಣ ಮಸುಕಾಗಿಸುವಂತಹ ದಿನವಾಗಿ ಬದಲಾಗಿರುವುದು... ಬದಲಾಗುತ್ತಿರುವುದು ಅತ್ಯಂತ ಖೇದಕರ! ತಮ್ಮ ತಮ್ಮ ಸ್ವಾರ್ಥಕ್ಕಾಗಿ, ಲಾಲಸೆಗಾಗಿ, ಅಧಿಕಾರಕ್ಕಾಗಿ ಮಾತ್ರ ಈ ದಿನದ ನೆನಪನ್ನು, ಇದಕ್ಕಾಗಿ ಹೋರಾಡಿ ಹುತಾತ್ಮರಾದವರ ಹೆಸರನ್ನು ಅಲ್ಲಲ್ಲಿ, ಅಪರೂಪಕ್ಕೆ ಸ್ಮರಿಸುವ ಸಮಾಜ/ರಾಜರಾಣಿಗಳು ಅಂದಿನವರ ಬಲಿದಾನದ ಮಹತ್ವವನ್ನೇ ಮರೆಯುತ್ತಾರೆ...ಅಕ್ಷರಶಃ ಮರೆತಿದ್ದಾರೆ! :( ನಾನು ಭಾರತೀಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶ್ರೀಸಾಮಾನ್ಯನೂ ಕಡಿಮೆಯಾಗುತ್ತಿದ್ದಾನೆ. ಆ ಮನಃಸ್ಥಿತಿಯೂ ಕಡಿಮೆಯಾಗುತ್ತಿದೆ.
ದೇಶ ನಮಗೇನು ಕೊಟ್ಟಿದೆ? ಸ್ವಾತಂತ್ರ್ಯ ಪೂರ್ವದ ಭಾರತವೇ ಚೆನ್ನಾಗಿತ್ತು... ಅಂದಿಗೂ ಇಂದಿಗೂ ಏನೊಂದೂ ವ್ಯತ್ಯಸವಾಗಿಲ್ಲ... ಎಂದೆಲ್ಲಾ ಬೊಬ್ಬಿರಿವವರು ಕೇವಲ ತಮ್ಮ ವೈಯಕ್ತಿಕ ನೆಲೆಯಲ್ಲಷ್ಟೇ ಯೋಚಿಸುತ್ತಾರೆ.... ತಮಗಾದ, ತಮ್ಮವರಿಗಾದ, ತಮ್ಮ ಸಮುದಾಯಕ್ಕಾದ, ತಮ್ಮ ಜಾತಿಗಾದ ಕೆಲವೊಂದು ಅನ್ಯಾಯವನ್ನು ಮಾತ್ರ ಮೇಲೆರಿಸಿಕೊಂಡು ತೀರಾ ಸಂಕುಚಿತ ಮನೋಭಾವವನ್ನು ಹೊಂದಿ, ಇಂದಿನ ದಿನವನ್ನೇ ಧಿಕ್ಕರಿಸುವಂತವರ ಅನಾರೋಗ್ಯಕರ ಮನಃಸ್ಥಿತಿಗೆ ನನ್ನ ಸಂಪೂರ್ಣ ಅನುಕಂಪವಿದೆ. ಅಂತಹವರಿಗೆ ದಾಸ್ಯತನದಲ್ಲೇ ದಿನಗಳೆಯಬೇಕಾಗಿದ್ದ ಅಂದಿನ ಜೀವನದ ಅರಿವನ್ನು ಆ ಭಗಂವತ ನೀಡದಿರುವುದೇ ಅವರ ಇಂದಿನ ಈ ಅನಾರೋಗ್ಯಕರ ಮನಃಸ್ಥಿತಿಗೆ ಕಾರಣ ಎಂದೆನ್ನಿಸುತ್ತದೆ ನನಗೆ! ತನ್ನ ದೇಶವನ್ನು, ಸ್ವಂತ ನೆಲವನ್ನು, ಅದರ ಮೇಲಿನ ಅಭಿಮಾನವನ್ನು ಅಲ್ಲಗಳೆಯುವ, ದೇಶಾಭಿಮಾನವನ್ನು ಧಿಕ್ಕರಿಸುವ ಸ್ವಾತಂತ್ರ್ಯ ಸಿಕ್ಕಿರುವುದು ಸ್ವತಂತ್ರ ಭಾರತದಲ್ಲೇ.... ಹುಟ್ಟಿದ ನೆಲದ ಬಗ್ಗೇ ಸದಾ ಅಸಮಾಧನ ತೋರುತ್ತಾ, ವ್ಯಂಗ್ಯವಾಡುತ್ತಾ, ಕ್ರಾಂತಿಯ ನೆಪದಲ್ಲಿ ದೇಶವನ್ನೇ ಇಬ್ಭಾಗಿಸಿ ರಕ್ತದೋಕುಳಿ ಚೆಲ್ಲುವ ಮನೋಭಾವ ಹುಟ್ಟಲು, ಬೆಳೆಯಲು ಸಾಧ್ಯವಾಗಿದ್ದೂ ಇದೇ ಸ್ವತಂತ್ರ ಭಾರತದಲ್ಲೇ! ಇಂತಹ ಸಮಾಜಘಾತುಕ ಜನರನ್ನು, ಅವರ ಅಹಿತಕರ ಚಿಂತನೆಗಳನ್ನು ಬೇರು ಸಮೇತ ಕಿತ್ತೊಗೆಯಲು ನಿಜವಾಗಿಯೂ ಇಂಗ್ಲೀಷರ ಹತ್ತಿರ ಮಾತ್ರ ಸಾಧ್ಯವಿತ್ತೇನೋ...... ಇಂದಿನ ಭಾರತದ ದುರ್ಬಲ ಮನಃಸ್ಥಿತಿಯವರಿಂದ ದೇಶದ್ರೋಹಿ ಮನಃಸ್ಥಿತಿಯುಳ್ಳವರನ್ನು ಸರಿ ಮಾಡಲು ಸಾಧ್ಯವಾಗದೇನೋ! ಹಾಗೆ ನೋಡಿದರೆ ಇಂದಿನ ಸಮಾಜದಲ್ಲಿ ಅಂತಹವರಿಗೇ ಮನ್ನಣೆ ಜಾಸ್ತಿ!
ಭಗಸತ್‍ಸಿಂಗ್, ಸುಖದೇವ್, ಲಾಲ್ ಬಹದ್ದೂರ್ ಶಾಸ್ತ್ರಿ, ಸಾವರ್ಕರ್, ಗಾಂಧಿಜೀ- ಮುಂತಾದವರ, ಬಿಡುಗಡೆಗಾಗಿ ಹೋರಾಡಿದ ಹಳ್ಳಿ ಹಳ್ಳಿಯ, ಮೂಲೆ ಮೂಲೆಯ ಶ್ರೀಸಾಮಾನ್ಯನ - ಇವರೆಲ್ಲರ ನಿಃಸ್ವಾರ್ಥ ದೇಶಸೇವೆ, ದೇಶಪ್ರೇಮದಿಂದಾಗಿಯೇ ಇಂದು ನಾವೆಲ್ಲಾ ಸ್ವತಂತ್ರವಾಗಿ ಯೋಚಿಸಲು, ಅಂತೆಯೇ ಬದುಕಲು ಸಾಧ್ಯವಾಗಿರುವುದು ಎನ್ನುವ ಸಾಮಾನ್ಯ ಅರಿವೂ ಮಾಯವಾಗುತ್ತಿರುವುದು ನಿಜಕ್ಕೂ ದುಃಖಕರ. ಮುಂದೊಂದು ದಿನ ಈ ದಿನವೇ ಜನಮಾನಸದಿಂದ ಮರೆಯುವಂತಾದರೂ ಆಶ್ವರ್ಯಪಡಬೇಕಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳು, ಸಮಾಜ ಘಾತುಕ ಕ್ರಾಂತಿಕಾರಿಗಳಿಂದ ಮತ್ತೆ ನಾವು ದಾಸ್ಯತನದೆಡೆ (ನಮ್ಮ ಸಂಕುಚಿತತೆ, ಸ್ವಾರ್ಥ ಬುದ್ಧಿಯೊಳಗೇ ನಾವು ಬಂಧಿಯಾಗಿ...) ಮುನ್ನಡೆಯುವ ಕಾಲ ದೂರವಿಲ್ಲವೇನೋ ಎಂದೆನಿಸುತ್ತದೆ!
ಭಾರತವೆಂದರೆ ಏನು? ಭಾರತೀಯ ಸಂಸ್ಕøತಿ, ಪ್ರಂಪರೆ ಎಂದರೆ ಏನೆಂದು ಅಂದೇ ಇಡೀ ಜಗತ್ತಿಗೇ ತೋರಿಕೊಟ್ಟವರು "ಸ್ವಾಮಿ ವಿವೇಕಾನಂದರು". ಅಂತಹವರ ಸದ್ವಿಚಾರಗಳು, ಚಿಂತನೆಗಳು ಇಂದಿನವರಿಗೆ ಮಾರ್ಗದರ್ಶಿಯಾಗಲು ಸಂಪೂರ್ಣ ಸಫಲವಾಗದಿದ್ದರೂ ನಮ್ಮ ಮುಂದಿನ ಪೀಳಿಗೆಗೆ ದಾರಿದೀವಿಗೆಯಾಗಲು ನಾವು ಶ್ರಮಿಸಬೇಕಿದೆ. ಇಂದು ನಮ್ಮ ಅಭಿಪ್ರಾಯವನ್ನು, ವ್ಯಕ್ತಿತ್ವವನ್ನು ಅಭಿವ್ಯಕ್ತಿಪಡಿಸಲು, ಅನ್ಯಾಯವನ್ನು ಪ್ರತಿಭಟಿಸಲು, ಎದುರಿಸಲು ನಮಗೆ ಉದಾರವಾಗಿ ಕೊಟ್ಟಿರುವ ಈ ಸ್ವಾತಂತ್ರ್ಯಕ್ಕಾಗಿ, ಈ ದಿನಕ್ಕಾಗಿ ನಾನು ಕೃತಾರ್ಥಳಾಗಿದ್ದೇನೆ. ಅಂದಿನವರ ಅವಿರತ ಹೋರಾಟದ, ಬಲಿದಾನದ, ತ್ಯಾಗದ ಫಲವೇ ಈ ಸ್ವಾತಂತ್ರ್ಯ. ಈದಿನದ ಮಹತ್ವ ನಿಜಕ್ಕೂ ನಮ್ಮೆಲ್ಲರೊಳಗಿನ ಸಣ್ಣತನಕ್ಕಿಂತಲೂ ತೀರಾ ದೊಡ್ಡದು. ಹಾಗಾಗಿಯೇ ನಾನು ಸ್ವತಂತ್ರ ಭಾರತದ ನಾಗರೀಕಳೆಂದು ಹೇಳಿಕೊಳ್ಳಲು ನನಗೆ ಅಪಾರ ಹೆಮ್ಮೆಯಿದೆ. ಅಂದಿನ ಇಂಗ್ಲೀಷರಿಗೂ ಇಂದಿನ ನಾಗರೀಕರಿಗೂ ಏನೊಂದೂ ವ್ಯತ್ಯಾಸವಿಲ್ಲ... ಅಂದಿನ ಪರಿಸ್ಥಿತಿಗೂ ಇಂದಿನದಕ್ಕೂ ವ್ಯತ್ಯಾಸವೇ ಇಲ್ಲ ಎನ್ನುವ ಧೋರಣೆಗೆ ಧಿಕ್ಕಾರವಿದೆ. ದೇಶಕ್ಕೆ ನಾವೇನು ಕೊಟ್ಟಿದ್ದೇವೆ.. ಕೊಡುತ್ತಿದ್ದೇವೆ ಎನ್ನುವುದನ್ನು ನೋಡದೇ ಕೇವಲ ಪಡೆಯುವಿಕೆಯ ಹುನ್ನಾರದಲ್ಲೇ ತೊಡಗಿರುವವರ ಪ್ರತಿ ಅಪಾರ ಅನುಕಂಪವಿದೆ (ಅವರ ಮಾನಸಿಕ ಅಸ್ವಸ್ಥತೆಗಾಗಿ...). ಸ್ವಾತಂತ್ರ್ಯಕ್ಕೂ ಸ್ವಚ್ಛಂದತೆಗೂ ವ್ಯತ್ಯಾಸ ತಿಳಿಯದೇ ನಾವು ದಾಸ್ಯದಲ್ಲಿದ್ದೇವೆಂದು ಕೂಗುವ ಮನಃಸ್ಥಿತಿಗೂ ಧಿಕ್ಕಾರ!
ಸ್ವಾತಂತ್ರ್ಯ ಸಂಗ್ರಾಮವು ಆವಿಷ್ಕಾರಗಳನ್ನು ಮಾಡಿತು. ಪ್ರತಿರೋಧದ ಹೊಸ ಸಾಧ್ಯತೆಗಳನ್ನು ಕಂಡುಕೊಂಡಿತು. ಅಪೂರ್ವವಾದ ಸಂಕೇತಗಳ ಮೂಲಕ ಅನನ್ಯ ಸಂವಹನ ಸಾಧನಗಳನ್ನು ರೂಪಿಸಿಕೊಂಡಿತು. ಸ್ವಾತಂತ್ರ್ಯ ಸಂಗ್ರಾಮದ ಯಶಸ್ಸಿಗೆ ಇವೆಲ್ಲವೂ ಕಾರಣವಾದವು. ಆ ಸಂಗ್ರಾಮವು ವಿದೇಶಿ ಆಡಳಿತವನ್ನು ತಿರಸ್ಕರಿಸಿ ದಂತೆ, ಈಗಿರುವ ಎಲ್ಲ ರಾಜಕೀಯ ಪಕ್ಷಗಳನ್ನೂ ತಿರಸ್ಕರಿಸಿ ಹೊಸ ಮಾದರಿಯ ಪಕ್ಷಗಳನ್ನು ಕಟ್ಟಲು ದೇಶದಲ್ಲೀಗ ಎರಡನೆಯ ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಈಗಿನ ಅನಿಷ್ಟ ರಾಜಕೀಯದ ಏಳು ಸುತ್ತಿನ ಕೋಟೆ ಅಭೇದ್ಯವೆಂದೂ ಅದನ್ನು ಮುರಿದು ಕಟ್ಟಲು ಸಾಧ್ಯವೇ ಇಲ್ಲವೆಂದೂ ಅಂದುಕೊಂಡಿರುವ ಮಾನಸಿಕ ದಾಸ್ಯದಿಂದ ಮೊದಲು ಮುಕ್ತಿ ಪಡೆಯದೇ ಹೊಸ ವ್ಯವಸ್ಥೆಯ ಕುರಿತಾದ ಯೋಚನೆ ಹುಟ್ಟಲಾರದು. ರಾಜಕೀಯದ ನಿಜ ಸ್ವಾತಂತ್ರ್ಯಕ್ಕಾಗಿ, ಈಗ ಇರುವ ಎಲ್ಲ ರಾಜಕೀಯ ಪಕ್ಷಗಳೂ ಆದಷ್ಟು ಬೇಗ ತಮ್ಮ ಅಂತ್ಯ ಕಾಣಬೇಕಾಗಿದೆ.