ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಆಯೋಜಿಸಲಾಗಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಧ್ವಜಾರೋಹಣವನ್ನು ನೇರವೇರಿಸುತ್ತಿದ್ದಂತೆ ಭಾರತೀಯ ವಾಯುಪಡೆಯ ಎರಡು 'ಮಿ-17 1ವಿ' ಹೆಲಿಕಾಪ್ಟರ್‌ಗಳು ಪುಷ್ಪವೃಷ್ಟಿ ಮಾಡಿವೆ.
ಈ ವೇಳೆ ಚಪ್ಪಾಳೆ ತಟ್ಟುವ ಮೂಲಕ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು. ಮೊದಲ ಹೆಲಿಕಾಪ್ಟರ್ ಅನ್ನು ವಿಂಗ್ ಕಮಾಂಡರ್ ಬಲದೇವ್ ಸಿಂಗ್ ಬಿಶ್ತ್ ಹಾಗೂ ಎರಡನೇ ಹೆಲಿಕಾಪ್ಟರ್ ಅನ್ನು ವಿಂಗ್ ಕಮಾಂಡರ್ ನಿಖಿಲ್ ಮೆಹ್ರೋತ್ರಾ ಅವರು ನಿರ್ವಹಿಸಿದರು. ತದನಂತರ, ಪ್ರಧಾನಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾಧನೆಗೈದ ಒಲಿಂಪಿಕ್ಸ್ ಕ್ರೀಡಾಪಟುಗಳು ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದ(ಎಸ್‌ಎಐ) ಇಬ್ಬರು ಅಧಿಕಾರಿಗಳು ಭಾಗವಹಿಸಿದ್ದರು.
ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿರುವ ವೈದ್ಯರು, ದಾದಿಯರು ಸೇರಿದಂತೆ ಕೋವಿಡ್ ಯೋಧರಿಗಾಗಿ ಕೆಂಪುಕೋಟೆಯಲ್ಲಿ ಪ್ರತ್ಯೇಕ ಬ್ಲಾಕ್ ಅನ್ನು ರಚಿಸಲಾಗಿತ್ತು.