ನವದೆಹಲಿ: ಭಾರತವು ಮಂಗಳವಾರ ಅಫ್ಗನ್ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ ತನ್ನ 78 ಪ್ರಜೆಗಳನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯಿಂದ ಇಲ್ಲಿಗೆ ಕರೆತಂದಿದೆ.
ತಾಲಿಬಾನ್ ಹಿಡಿತದಲ್ಲಿರುವ ಕಾಬೂಲ್‌ನಿಂದ ತಜಿಕ್ ನಗರಕ್ಕೆ 25 ಮಂದಿ ಭಾರತೀಯ ಪ್ರಜೆಗಳು ಸೇರಿದಂತೆ ಅಫ್ಗನ್ ಸಿಖ್ಖರು ಮತ್ತು ಹಿಂದೂಗಳನ್ನು ವಾಯುಪಡೆ ವಿಮಾನದ ಮೂಲಕ ಸೋಮವಾರ ಸ್ಥಳಾಂತರಿಸಲಾಗಿತ್ತು. ಮಂಗಳವಾರ ಏರ್ ಇಂಡಿಯಾ ವಿಮಾನದ ಮೂಲಕ ಅವರನ್ನು ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕರೆತರಲಾಯಿತು.
ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ವಿ ಮುರಳೀಧರನ್ ಅವರು ಬರಮಾಡಿಕೊಂಡರು. ಈ ಮೂಲಕ ಭಾರತಕ್ಕೆ 800ಕ್ಕಿಂತ ಅಧಿಕ ಮಂದಿಯನ್ನು ಕರೆತಂದಂತಾಗಿದೆ. ತಂಡದೊಂದಿಗೆ ಸಿಖ್ ಧರ್ಮಗ್ರಂಥ ಗುರು ಗ್ರಂಥ ಸಾಹಿಬ್‌ನ ಮೂರು ಪ್ರತಿಗಳನ್ನು ತರಲಾಗಿತ್ತು.
'ಸ್ವಲ್ಪ ಸಮಯದ ಹಿಂದೆ ಕಾಬೂಲ್‌ನಿಂದ ದೆಹಲಿಗೆ ಸಿಖ್ ಧರ್ಮ ಗ್ರಂಥ ಗುರು ಗ್ರಂಥ ಸಾಹಿಬ್‌ನ ಮೂರು ಪ್ರತಿಗಳನ್ನು ಸ್ವೀಕರಿಸಿ, ಗ್ರಂಥಕ್ಕೆ ನಮಸ್ಕರಿಸಿದೆ' ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.