ಭೋಪಾಲ್: 'ಕೋವಿಡ್-19' ಸಾಂಕ್ರಾಮಿಕದ ಅವಧಿಯಲ್ಲಿ ದೇಶದಾದ್ಯಂತ 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ (ಪಿಎಂಜಿಕೆವೈ) ಫಲಾನುಭವಿಗಳೊಂದಿಗೆ ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಅವರು, 'ಈ ಯೋಜನೆಯಡಿ ಮಧ್ಯಪ್ರದೇಶದ 5 ಕೋಟಿ ಜನರೂ ಸೇರಿದಂತೆ ದೇಶದಾದ್ಯಂತ 80 ಕೋಟಿ ಜನರಿಗೆ ಉಚಿತ ಪಡಿತರ ವಿತರಿಸಲಾಗಿದೆ' ಎಂದು ಹೇಳಿದರು.
'ನೂರು ವರ್ಷಗಳಲ್ಲಿ ಮನುಕುಲ ಕಂಡಿರದಂತಹ ಬಹುದೊಡ್ಡ ವಿಪತ್ತನ್ನು ಕೊರೊನಾ ಸಾಂಕ್ರಾಮಿಕ ತಂದೊಡ್ಡಿದೆ. ಇದರಿಂದ ರಕ್ಷಿಸಿಕೊಳ್ಳಲು ಜನರು ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತಹ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು' ಎಂದರು.
ಕೊರೊನಾ ಸಾಂಕ್ರಾಮಿಕದಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸಲು ಸರ್ಕಾರ ರೂಪಿಸಿರುವ ಕಾರ್ಯತಂತ್ರದಲ್ಲಿ ಬಡವರಿಗೆ ಪ್ರಧಾನ ಆದ್ಯತೆ ನೀಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಥವಾ ಪ್ರಧಾನ ಮಂತ್ರಿ ರೋಜಗಾರ್ ಯೋಜನೆ ಸೇರಿದಂತೆ, ಯಾವುದೇ ಯೋಜನೆಯಲ್ಲಿ ಬಡವರ ಆಹಾರ ಮತ್ತು ಉದ್ಯೋಗಕ್ಕೆ ಸರ್ಕಾರ ಆದ್ಯತೆ ನೀಡಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ 'ವೋಕಲ್ ಫಾರ್ ಲೋಕಲ್' ಕುರಿತು ಒತ್ತಿ ಹೇಳಿದ ಪ್ರಧಾನಿಯವರು, ಹಬ್ಬ, ಮದುವೆಯಂತಹ ಶುಭ ಸಮಾರಂಭಗಳಲ್ಲಿ, ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಲು ಮುಂದಾಗುವ ಮೂಲಕ, ಆ ಕ್ಷೇತ್ರದಲ್ಲಿ ದುಡಿಯುತ್ತಿರುವವರಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.