ಬಲ್ಲಿಯಾ, ಉತ್ತರ ಪ್ರದೇಶ : ಕೃಷಿ ಕಾಯ್ದೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಸಂಬಂಧಿಸಿ ತನ್ನ ಬೇಡಿಕೆಗಳ ಬಗ್ಗೆ ಮಾಸಾಂತ್ಯದೊಳಗೆ ಕ್ರಮಕೈಗೊಳ್ಳದಿದ್ದರೆ ಸೆಪ್ಟೆಂಬರ್ 8ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಆರ್‌ಎಸ್‌ಎಸ್ ಮಾನ್ಯತೆ ಹೊಂದಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಎಚ್ಚರಿಸಿದೆ.
ಕೃಷಿ ವೆಚ್ಚವನ್ನು ಆಧರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಹಾಗೂ ಕಾಯ್ದೆ ಕುರಿತಂತೆ ಕೃಷಿಕರ ಆತಂಕಗಳನ್ನು ಪರಿಹರಿಸಲು ಹೊಸದಾಗಿ ಕಾಯ್ದೆ ರೂಪಿಸಬೇಕು ಎಂದು ಬಿಕೆಎಸ್ ಒತ್ತಾಯಿಸಿದೆ.
ಬೇಡಿಕೆಗಳ ಬಗ್ಗೆ ಕ್ರಮವಹಿಸಲು ಮೋದಿ ನೇತೃತ್ವದ ಸರ್ಕಾರಕ್ಕೆ ಆಗಸ್ಟ್ 31ರವರೆಗೆ ಗಡುವು ನೀಡಲಾಗಿತ್ತು. ಅಷ್ಟರೊಳಗೆ ಕ್ರಮಕೈಗೊಳ್ಳದಿದ್ದರೆ ಸೆ. 8ರಂದು ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಬಿಕೆಎಸ್ ಖಜಾಂಚಿ ಯುಗಲ್ ಕಿಶೋರ್ ಮಿಶ್ರಾ ಅವರು ಹೇಳಿದರು.
ಕೃಷಿ ಉತ್ಪನ್ನಗಳಿಗೆ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಲಾಭಕರವಾಗಿಲ್ಲ. ಇದೇ ಕಾರಣಕ್ಕಾಗಿ ಬಿಕೆಎಸ್ ಪ್ರತಿಭಟನೆಗೆ ಮುಂದಾಗುತ್ತಿದೆ. ಕೃಷಿಕರ ಹಿತಾಸಕ್ತಿ ರಕ್ಷಣೆಗೆ ಯಾವುದೇ ಸರ್ಕಾರ ಗಂಭೀರ ಚಿಂತನೆ ಹೊಂದಿಲ್ಲ ಎಂದರು.
ರೈತರ ಆದಾಯ ದುಪ್ಪಟ್ಟುಗೊಳಿಸುತ್ತೇವೆ ಎಂಬ ಮೋದಿ ಸರ್ಕಾರದ ಭರವಸೆ ಕುರಿತು ಗಮನಸೆಳೆದಾಗ, 'ಮೊದಲು ಅವರಿಗೆ ಎಷ್ಟು ಹಣ ವ್ಯಯಿಸಲಾಗಿದೆ ಎಂದು ತಿಳಿಸಲಿ' ಎಂದರು. ಎ.ಬಿ.ವಾಜಪೇಯಿ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರಗಳು ಕೃಷಿಕರನ್ನು ಕಡೆಗಣಿಸಿದ್ದವೇ ಎಂಬ ಪ್ರಶ್ನೆಗೆ 'ಖಂಡಿತವಾಗಿ' ಎಂದರು.
ಕನಿಷ್ಠ ಬೆಂಬಲ ಬೆಲೆಯು ಎಂದಿಗೂ ವೆಚ್ಚ ಆಧರಿತವಾಗಿರಬೇಕು ಎಂದು ಎರಡೂ ಸರ್ಕಾರಗಳು ಪರಿಗಣಿಸಲಿಲ್ಲ ಎಂದು ಪ್ರತಿಕ್ರಿಯಿಸಿದರು.