HEALTH TIPS

ಕೇರಳದ ಶೇ.90ರಷ್ಟು ಕೊರೊನಾವೈರಸ್ ರೋಗಿಗಳಲ್ಲಿ ಡೆಲ್ಟಾ ವೈರಸ್!

               ತಿರುವನಂತಪುರಂ: ಕೇರಳದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಮುಂದಿನ ದಿನಗಳಲ್ಲಿ ಎರಡು ಪಟ್ಟು ಹೆಚ್ಚಾಗುವ ಆತಂಕವಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿಧಾನಸಭೆ ಕಲಾಪವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊವಿಡ್-19 ಪರಿಸ್ಥಿತಿಯ ಬಗ್ಗೆ ವಾಸ್ತವದ ಚಿತ್ರಣವನ್ನು ತೆರೆದಿಟ್ಟಿದ್ದಾರೆ.

             "ರಾಜ್ಯದ ಕೊರೊನಾವೈರಸ್ ಸೋಂಕಿತರಲ್ಲಿ ಶೇ.90ರಷ್ಟು ಜನರಿಗೆ ಡೆಲ್ಟಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ರೂಪಾಂತರ ವೈರಸ್ ಇತರೆ ತಳಿಗಿಂತ ಹೆಚ್ಚು ಅಪಾಯಕಾರಿ ಮತ್ತು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಮೂರನೇ ಅಲೆ ಆರಂಭದ ಹೊಸ್ತಿಲಿನಲ್ಲಿದ್ದರೂ, ರಾಜ್ಯದಲ್ಲಿ ಎರಡನೇ ಅಲೆಯ ಕಾಟ ಇನ್ನೂ ಕಡಿಮೆಯಾಗಿಲ್ಲ. ಈ ಹಂತದಲ್ಲಿ ಯಾವುದೇ ನಿರ್ಬಂಧಗಳನ್ನು ಸಡಿಲಿಸುವುದಕ್ಕೆ ಸಾಧ್ಯವಿಲ್ಲ," ಎಂದಿದ್ದಾರೆ.

                               ಕೇರಳದಲ್ಲಿ ನಿರ್ಬಂಧ ಸಡಲೀಕರಣ ಯಾವಾಗ?:

          "ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಜನರ ಜೀವನದ ಸುರಕ್ಷತೆ ಬಗ್ಗೆ ಮೊದಲು ಖಾತರಿಪಡಿಸಿಕೊಳ್ಳಬೇಕಿದೆ. ತದನಂತರವೇ ನಿರ್ಬಂಧ ಸಡಿಲಗೊಳಿಸುವುದನ್ನು ಅನುಮತಿಸಬಹುದು ಎಂದು ಸರ್ಕಾರವು ಅಭಿಪ್ರಾಯಪಟ್ಟಿದೆ. ಏಕಾಏಕಿಯಾಗಿ ನಿರ್ಬಂಧಗಳನ್ನು ಸಡಿಲಗೊಳಿಸಿದರೆ ಅಥವಾ ತೆರವುಗೊಳಿಸಿದರೆ ಸರ್ಕಾರವೇ ಭಾರಿ ದಂಡ ತೆರಬೇಕಾಗುತ್ತದೆ. ಮೇಲಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಆಧಾರದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ," ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಕೆ ಬಾಬು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

                                  "ಕೊವಿಡ್-19 ಹೆಸರಿನಲ್ಲಿ ಸಾರ್ವಜನಿಕರ ಸುಲಿಗೆ":

          "ಸರ್ಕಾರದ ಜಾರಿಗೊಳಿಸಿರುವ ಹೊಸ ನಿರ್ಬಂಧಗಳು ಸಾರ್ವಜನಿಕರ ಜ್ಞಾನಕ್ಕೆ ದೊಡ್ಡ ಸವಾಲಾಗಿವೆ. ಅಂಗಡಿಗಳಿಗೆ ಹೋಗುವ ಸಂದರ್ಭದಲ್ಲಿ ಜನರು ಕೋವಿಡ್-19 ಪ್ರಮಾಣಪತ್ರವನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಿಲ್ಲ ಎಂದು ಸಚಿವರು ಹೇಳಿದ್ದರೆ, ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದಾಗ ಅದನ್ನು ಕಡ್ಡಾಯಗೊಳಿಸಿದರು. ಹಾಗಿದ್ದರೆ ರಾಜ್ಯದ ಜನರು ಯಾರನ್ನು ನಂಬಬೇಕು ಎಂದು ಶಾಸಕ ಬಾಬು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸರ್ಕಾರದ ಹೊಸ ನಿಯಮಗಳು ಕೊರೊನಾವೈರಸ್ ಹೆಸರಿನಲ್ಲಿ ಸಾರ್ವಜನಿಕರಿಂದ ದಂಡ ವಸೂಲಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

                               ದಂಡ ನೀತಿಯ ಬಗ್ಗೆ ಪ್ರಶ್ನಿಸಿದ ವಿಪಕ್ಷ ನಾಯಕರು:

       ಕೇರಳದಲ್ಲಿ ಹೊಸ ನಿರ್ಬಂಧಗಳನ್ನು ಜಾರಿಗೊಳಿಸುವ ಮೂಲಕ ಪೊಲೀಸ್ ರಾಜ್ಯದ ವ್ಯಸ್ಥೆಯನ್ನು ಅನುಷ್ಠಾನಗೊಳಿಸಲು ಹೊರಟಿದ್ದೀರಾ ಎಂದು ಪ್ರತಿಪಕ್ಷ ನಾಯಕ ವಿ ಡಿ ಸತೀಶನ್ ಪ್ರಶ್ನಿಸಿದ್ದಾರೆ. "ಪ್ರಸ್ತುತ ಸಂದರ್ಭದಲ್ಲಿ ಶೇ.57ರಷ್ಟು ಜನರು ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಂಡಿಲ್ಲ. ಸರ್ಕಾರವು ಲಸಿಕೆ ಪಡೆದುಕೊಳ್ಳದ ಜನರು ಅಂಗಡಿಗಳಿಗೆ ಹೋದರೆ 500 ರೂಪಾಯಿ ದಂಡ ವಿಧಿಸುವುದಾಗಿ ಘೋಷಿಸಿದೆ. ಇಂಥ ಸಂದರ್ಭದಲ್ಲಿ ತಿಂಗಳಿಗೆ 5000 ರೂಪಾಯಿ ದುಡಿಯುವುದಕ್ಕಾಗಿ ಅಂಗಡಿಗೆ ತೆರಳುವ 20 ವರ್ಷದ ಯುವತಿಯೊಬ್ಬಳು 500 ರೂಪಾಯಿ ದಂಡವನ್ನು ಕಟ್ಟುವುದಕ್ಕೆ ಸಾಧ್ಯವಿದೆಯೇ," ಎಂದು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಯ ಬೆನ್ನಲ್ಲೇ ಪ್ರತಿಪಕ್ಷಗಳು ವಿಧಾನಸಭಾ ಕಲಾಪವನ್ನು ಬಹಿಷ್ಕರಿಸಿ ಹೊರ ನಡೆದವು.

                                    ಕೇರಳದಲ್ಲಿ ಕೊರೊನಾವೈರಸ್ ಸೋಂಕಿನ ಏರಿಳಿತ:

     ಭಾರತದಲ್ಲಿ ಶುಕ್ರವಾರ ಒಂದೇ ದಿನ 44643 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಹೊಸ ಪ್ರಕರಣಗಳಲ್ಲಿ ಶೇ.50ರಷ್ಟು ಸೋಂಕಿತ ಪ್ರಕರಣಗಳು ಕೇರಳದಲ್ಲೇ ವರದಿಯಾಗಿವೆ. ರಾಜ್ಯದಲ್ಲಿ ಒಂದೇ ದಿನ 22,040 ಮಂದಿಗೆಕೊವಿಡ್-19 ಸೋಂಕು ತಗುಲಿದ್ದು, ಮಹಾಮಾರಿಗೆ ಒಂದೇ ದಿನ 117 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 20,046 ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 34,93,603ಕ್ಕೆ ಏರಿಕೆಯಾಗಿದೆ. ಈವರೆಗೂ 32,97,834 ಸೋಂಕಿತರು ಗುಣಮುಖರಾಗಿದ್ದರೆ, ಮಹಾಮಾರಿಗೆ ಈವರೆಗೂ 17,328 ಜನರು ಬಲಿಯಾಗಿದ್ದಾರೆ. ಇದರ ಹೊರತಾಗಿ 1,77,923 ಸಕ್ರಿಯ ಪ್ರಕರಣಗಳಿವೆ.

                              ಓಣಂ ಆಚರಣೆ ಮೊದಲಿನಂತೆ ಇರುವುದಿಲ್ಲ:

           ಕೇರಳಿಗರು ಈ ಬಾರಿ ಓಣಂ ಹಬ್ಬವನ್ನು ಮೊದಲಿನಂತೆ ಆಚರಿಸುವಂತೆ ಇರುವುದಿಲ್ಲ. ಹಬ್ಬ ಆಚರಣೆಗೂ ಮೊದಲು ಕೊರೊನಾವೈರಸ್ ಬಗ್ಗೆ ಜಾಗರೂಕತೆಯಿಂದ ಇರಬೇಕಾಗಿರುತ್ತದೆ. ರಾಜ್ಯದಲ್ಲಿ ಕೊವಿಡ್ ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಸರ್ಕಾರವು ಸಮತೋಲನ ಕಾಯ್ದುಕೊಂಡಿದೆ. ಆದರೆ, ಲಸಿಕೆ ವಿತರಣೆ ವೈಫಲ್ಯದಿಂದಾಗಿ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ, ಎಂದು ಗಗನ್ ದೀಪ್ ಕಾಂಗ್ ಹೇಳಿದ್ದಾರೆ.

            "ಜುಲೈ ತಿಂಗಳಿನಲ್ಲಿ ಕೇರಳ ಮತ್ತು ಈಶಾನ್ಯದ ಕೆಲವು ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡು ಬಂದಿದೆ," ಎಂದು ಕೊವಿಡ್-19 ಟ್ರ್ಯಾಕರ್ ಅಭಿವೃದ್ಧಿಪಡಿಸಿರುವ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪೌಲ್ ಕುಟ್ಟುಮಾನ್ ಹೇಳಿದ್ದಾರೆ. "ಆದರೆ ಕೆಲವು ರಾಜ್ಯಗಳು ಜುಲೈನಲ್ಲಿ ಅಲ್ಪಾವಧಿಯಲ್ಲೇ ಉಲ್ಬಣಗೊಂಡ ಕೊರೊನಾವೈರಸ್ ಪ್ರಕರಣಗಳ ಪ್ರಮಾಣ ತ್ವರಿತ ಗತಿಯಲ್ಲಿ ಕಡಿಮೆಯಾಯಿತು, ಇದರಿಂದಾಗಿ ದೇಶದ ಒಟ್ಟಾರೆ ಸ್ಥಿತಿ ಸ್ಥಿರವಾಗಿದೆ," ಎಂದು ಹೈದ್ರಾಬಾದ್ ಮೂಲದ ಭಾರತೀಯ ತಾಂತ್ರಿಕ ಸಂಸ್ಥೆ ಸಂಶೋಧಕ ಮಥುಕುಮಲ್ಲಿ ವಿದ್ಯಾಸಾಗರ್ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries