ಕಾಬೂಲ್: ಅಮೆರಿಕಾದಲ್ಲಿ 2001ರ ಸೆಪ್ಟೆಂಬರ್ 11ರಂದು ನಡೆದಿದ್ದ ದಾಳಿಯಲ್ಲಿ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪಾತ್ರವೇ ಇರಲಿಲ್ಲ ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ.
ಅಫ್ಘಾನಿಸ್ತಾನದ ಮೇಲೆ ಯುದ್ಧ ಮಾಡಲು ಅಮೆರಿಕಾ ಈ ದಾಳಿಗಳನ್ನು ಬಳಸಿಕೊಂಡಿದೆ ಎಂದು ಅಮೆರಿಕಾದ ವಿರುದ್ದವೇ ಆರೋಪಿಸುತ್ತಿವೆ. ಈ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ಭಾಗಿಯಾಗಿದ್ದ ಎನ್ನಲು ಪುರಾವೆ ಏನು? ಎಂದು ತಾಲಿಬಾನ್ ವಕ್ತಾರ ಜಬಿಬುಲ್ಲಾ ಮುಜಾಹಿದ್ ಪ್ರಶ್ನಿಸಿದ್ದಾನೆ. 20 ವರ್ಷಗಳ ಯುದ್ಧದ ನಂತರವೂ 9/11 ದಾಳಿಯಲ್ಲಿ ಲಾಡೆನ್ ಭಾಗಿಯಾಗಿದ್ದ ಎಂಬುದಕ್ಕೆ ಯಾವುದೇ ಸಾಕ್ಷ್ಯ, ಪುರಾವೆಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾನೆ.
ನಮ್ಮ ದೇಶದ ಮೇಲಿನ ಯುದ್ಧಕ್ಕೆ ಕಾರಣಗಳೇ ಇಲ್ಲ, ಯುದ್ದಕ್ಕಾಗಿ ಅಮೆರಿಕಾ 9/11 ದಾಳಿಯನ್ನು ನೆಪವಾಗಿ ಬಳಸಿಕೊಂಡಿತ್ತು ಎಂದು ಆತ ಸಂದರ್ಶವೊಂದರಲ್ಲಿ ಹೇಳಿದ್ದಾನೆ. ಅಲ್-ಖೈದಾ ದಂತಹ ಭಯೋತ್ಪಾದಕ ಸಂಘಟನೆಗಳು ಮತ್ತೆ ಇಂತಹ ದಾಳಿಗಳನ್ನು ನಡೆಸುವುದಿಲ್ಲ ಎಂದು ಖಾತರಿ ನೀಡಬಹುದೇ ಎಂಬ ಪ್ರಶ್ನೆಗೆ ಅಫ್ಘನ್ ಮಣ್ಣನ್ನು ಯಾವುದೇ ದೇಶದ ವಿರುದ್ದದ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವುದಿಲ್ಲ ಎಂದು ಈಗಾಗಲೇ ಹಲವು ಬಾರಿ ಹೇಳಿದ್ದೇನೆ ಎಂದು ಉತ್ತರಿಸಿದ್ದಾನೆ. ಬಿನ್ ಲಾಡೆನ್ ಅಮೆರಿಕಾಗೆ ಸಮಸ್ಯೆಯಾಗಿದ್ದಾಗ, ಆತ ಅಫ್ಘಾನಿಸ್ತಾನದಲ್ಲಿದ್ದ ದಾಳಿಯಲ್ಲಿ ಆತನ ಪಾತ್ರವಿದೆ ಎಂದು ಹೇಗೆ ಹೇಳಲು ಸಾಧ್ಯ? ನಾವು ಈ (ಅಫ್ಘನ್) ಮಣ್ಣನ್ನು ಯಾರನ್ನೂ ಗುರಿಯಾಗಿಸಲು ಅವಕಾಶ ನೀಡುವುದಿಲ್ಲ ಎಂದು ಉತ್ತರಿಸಿದ್ದಾನೆ.
ಆದರೆ, ಅಲ್ ಖೈದಾ, ಜೈಶ್-ಎ-ಮೊಹಮ್ಮದ್ ನಂತಹ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳು ತಾಲಿಬಾನಿಗಳನ್ನು ಬೆಂಬಲಿಸುತ್ತಿವೆ ಎಂಬ ಆರೋಪಗಳು ವಿಶ್ವದಾದ್ಯಂತ ಕೇಳಿಬರುತ್ತಿವೆ. ಪಾಕಿಸ್ತಾನದ ಅಲ್-ಖೈದಾ ನೆಲೆಗಳಲ್ಲಿ ತಾಲಿಬಾನಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಅಫ್ಘಾನಿಸ್ತಾನ ಪಾಪ್ ತಾರೆ ಆರ್ಯಾನ ಸಯೀದ್ ಇತ್ತೀಚೆಗೆ ಸಾರ್ವಜನಿಕವಾಗಿ ಆರೋಪಿಸಿದ್ದಾರೆ.
ಪಾಕಿಸ್ತಾನ ತಾಲಿಬಾನ್ ಬೆಂಬಲಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಅವರು ಹೇಳಿದ್ದಾರೆ. ಆಗ ಬಿನ್ ಲಾಡೆನ್ ನನ್ನು ತನಗೆ ಒಪ್ಪಿಸಲು ಅಮೆರಿಕಾ ಕೋರಿದ್ದಾಗ ತಾಲಿಬಾನ್ ನಿರಾಕರಿಸಿದ್ದನ್ನು ವಿಶ್ಲೇಷಕರು ಸ್ಮರಿಸುತ್ತಾರೆ. ಈ ಕಾರಣಕ್ಕಾಗಿ ಅಮೆರಿಕಾ ಅವರ ವಿರುದ್ಧ ಯುದ್ಧಕ್ಕೆ ಹೋಯಿತು. ತಾಲಿಬಾನ್ ಹಾಗೂ ಅಲ್-ಖೈದಾವನ್ನು ಪ್ರತ್ಯೇಕವಾಗಿ ನೋಡಬಾರದು ಎಂದು ವಿಶ್ಲೇಷಕರ ಅಭಿಮತ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ಮತ್ತೆ ತಲೆ ಎತ್ತುವ ಸೂಚನೆಗಳಿವೆ. ಅಫ್ಘಾನಿಸ್ತಾನದಿಂದ ಭಯೋತ್ಪಾದಕ ಶಕ್ತಿಗಳ ಪ್ರಭಾವ ನೆರೆಯ ರಾಷ್ಟ್ರಗಳ ಮೇಲೆ ಬೀಳಬಾರದು ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಪ್ರತಿಕ್ರಿಯಿಸಿದ್ದಾರೆ. ಅವರು ಪರೋಕ್ಷವಾಗಿ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿದಂತೆ ಕಂಡುಬರುತ್ತಿದೆ.
ಈ ನಡುವೆ ತಮಗೆ ಮಹಿಳೆಯರೆಂದರೆ ಅಪಾರ ಗೌರವ, ನಮ್ಮನ್ನು ನೋಡಿ ಅವರೇಕೆ ಭಯಪಡಬೇಕು ಎಂದು ತಾಲಿಬಾನ್ ವಕ್ತಾರ ಜಬಿಬುಲ್ಲಾ ಮುಜಾಹಿದ್ ಪ್ರಶ್ನಿಸಿದ್ದು, ವಾಸ್ತವವಾಗಿ ಅವರು ತಮ್ಮ ಬಗ್ಗೆ ಹೆಮ್ಮೆ ಪಡಬೇಕು. ಅಫ್ಘಾನಿಗಳು ದೇಶವನ್ನು ತೊರೆಯಬಾರದು ಅವರನ್ನು ನಾವು ಕ್ಷಮಿಸಿದ್ದೇವೆ ಎಂದು ಹೇಳಿದ್ದಾನೆ. . ಅವರ ಅಗತ್ಯ ಈ ದೇಶಕ್ಕೆ ಹೆಚ್ಚಿನ ರೀತಿಯಲ್ಲಿದೆ. 'ನಮ್ಮ ದೇಶದ ಜನರು ನಮಗೆ ಬೇಕು. ಯುವಕರು, ವಿದ್ಯಾವಂತರು ನಮಗೆ ಅಗತ್ಯವಿದೆ ಎಂದು ಆತ ಹೇಳಿಕೊಂಡಿದ್ದಾನೆ.