ನವದೆಹಲಿ: ಜುಲೈ ತಿಂಗಳಲ್ಲಿ ಗೂಗಲ್ ಸಂಸ್ಥೆ ದೂರುಗಳನ್ನು ಆಧರಿಸಿ 95,680 ವಿಷಯದ ತುಣುಕುಗಳನ್ನು ತೆಗೆದುಹಾಕಿದೆ. ಗೂಗಲ್ ಸಂಸ್ಥೆಗೆ 36,934 ದೂರುಗಳನ್ನು ಸ್ವೀಕರಿಸಿದ್ದು, ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಬಳಕೆದಾರರಿಂದ ವರದಿಯನ್ನಾಧರಿಸಿ ಕಂಟೆಂಟ್ ನ್ನು ತೆಗೆಯುವುದರ ಜೊತೆಗೆ ಸ್ವಯಂ ಚಾಲಿತವಾಗಿ 5,76,892 ಕಂಟೆಂಟ್ ತುಣುಕುಗಳನ್ನು ಗೂಗಲ್ ತೆಗೆದುಹಾಕಿದೆ.
ಮೇ.26 ರಂದು ಜಾರಿಗೆ ಬಂದಿರುವ ಹೊಸ ಐಟಿ ನಿಯಮಗಳ ಅನುಸಾರವಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಮಾಸಿಕವಾಗಿ ಬಳಕೆದಾರರಿಂದ ಸ್ವೀಕರಿಸಿದ ದೂರು ಹಾಗೂ ಅದಕ್ಕೆ ಸ್ಪಂದಿಸಿದ ವರದಿಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ.
ಗೊತ್ತುಪಡಿಸಿದ ಕಾರ್ಯವಿಧಾನಗಳ ಮೂಲಕ ಬಳಕೆದಾರರಿಂದ 36,934 ದೂರುಗಳನ್ನು ಸಂಸ್ಥೆ ಸ್ವೀಕರಿಸಿದ್ದು, ದೂರುಗಳನ್ನಾಧರಿಸಿ ತೆಗೆದುಹಾಕಲಾದ ಕಂಟೆಂಟ್ ತುಣುಕುಗಳು ಇದೇ ಮೊದಲ ಬಾರಿಗೆ ದಾಖಲೆಯ ಪ್ರಮಾಣವನ್ನು ತಲುಪಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ. ಜೂನ್ ತಿಂಗಳಲ್ಲಿ ಗೂಗಲ್ 36,265 ದೂರುಗಳನ್ನು ಸ್ವೀಕರಿಸಿ ಇದರ ಆಧಾರದಲ್ಲಿ 83,613 ಕಂಟೆಂಟ್ ತುಣುಕುಗಳನ್ನು ತೆಗೆದುಹಾಕಿತ್ತು. ಏಪ್ರಿಲ್ ಮೇ ತಿಂಗಳಲ್ಲಿ ಅನುಕ್ರಮವಾಗಿ 59,350 ಕಂಟೆಂಟ್ ಹಾಗೂ 71,132 ಕಂಟೆಂಟ್ ನ್ನು ತೆಗೆದುಹಾಕಲಾಗಿತ್ತು.