ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನಾಳೆ ರೈತರ ಬ್ಯಾಂಕ್ ಖಾತೆಗಳಿಗೆ 9 ನೇ ಕಂತಿನ ಎರಡು ಸಾವಿರ ರೂ. ಹಣ ಜಮೆಯಾಗಲಿದೆ.
ಸರಿಸುಮಾರು 9 ಕೋಟಿ 75 ಲಕ್ಷ ರೈತರಿಗೆ ನಾಳೆ ಎರಡು ಸಾವಿರ ರೂ ಜಮೆಯಾಗಲಿದೆ. ಕೇಂದ್ರ ಸರ್ಕಾರ ವಾರ್ಷಿಕವಾಗಿ ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2 ಸಾವಿರದಂತೆ ಒಟ್ಟು ಆರು ಸಾವಿರ ರೂಪಾಯಿಗಳನ್ನು ನೇರ ವರ್ಗಾವಣೆ ಮಾಡುತ್ತಿದೆ.
ಪ್ರಧಾನಮಂತ್ರಿ ಕಚೇರಿ ಮೂಲಗಳ ಪ್ರಕಾರ ನಾಳೆ ದೇಶದ 9 ಕೋಟಿ 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ,19 ಸಾವಿರದ 500 ಕೋಟಿ ರೂಪಾಯಿ ಜಮೆ ಮಾಡಲಾಗುವುದು. ವಾರ್ಷಿಕವಾಗಿ ಸಣ್ಣ ರೈತರಿಗೆ ಅನುಕೂಲವಾಗುವಂತೆ ಪ್ರತಿ 4 ತಿಂಗಳಿಗೊಮ್ಮೆ ಅವರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಜಮೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಆಗಸ್ಟ್ ನಿಂದ ನವೆಂಬರ್ ವರೆಗೆ ಎರಡನೆ ಮತ್ತು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಮೂರನೇ ಕಂತಿನ ಹಣ ಬರುತ್ತಿದೆ.
ಕಳೆದ ಮೇ 14 ರಂದು 8ನೇ ಕಂತಿನ ಹಣ ಸಂದಾಯವಾಗಿತ್ತು. ನಾಳೆ ಪ್ರಧಾನಿ ಮೋದಿ ಅವರು ರೈತರ ಖಾತೆಗೆ ಹಣ ಜಮೆ ಮಾಡುವುದರ ಆಯ್ದ ರೈತರ ಜೊತೆಗೆ ಸಂವಾದ ನಡೆಸಲಿದ್ದಾರೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಹ ಭಾಗಿಯಾಗಲಿದ್ದಾರೆ ಎಂದು ಪಿಎಂ ಕಚೇರಿ ಮೂಲಗಳು ತಿಳಿಸಿವೆ.