ರಾಂಚಿ: ಸದ್ಯದಲ್ಲೇ ಝಾರ್ಖಂಡ್ ರಾಜ್ಯವು ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆಗೆ ಕಾನೂನು ತರುವ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ. ಈ ಉದ್ದೇಶಕ್ಕಾಗಿ, ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ 'ಮೆಡಿಕಲ್ ಪ್ರೊಟೆಕ್ಷನ್ ಬಿಲ್'ಅನ್ನು ರಾಜ್ಯ ಸರ್ಕಾರ ಮಂಡಿಸಲಿದೆ ಎನ್ನಲಾಗಿದೆ.
ವೈದ್ಯರು, ನರ್ಸ್ಗಳು ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸೇವೆ ಎಷ್ಟು ಮುಖ್ಯ ಎಂಬುದು ಕರೊನಾ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅನುಭವವಾಗಿದೆ. ಆದರೆ ಇದೇ ಸಂದರ್ಭದಲ್ಲಿ ರೋಗಿಗಳ ಸಾವಿನಿಂದ ದುಃಖಿತರಾಗಿ ವೈದ್ಯಕೀಯ ಸಿಬ್ಬಂದಿ ಮೇಲೆ ಜನರು ಹಲ್ಲೆ ಮಾಡಿದ ಪ್ರಸಂಗಗಳೂ ಭಾರತದಲ್ಲಿ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯರ ಸಂಘವು ವೈದ್ಯಕೀಯ ಸಿಬ್ಬಂದಿ ರಕ್ಷಣೆ ಒದಗಿಸುವ ಪರಿಣಾಮಕಾರಿ ಕಾನೂನು ತರಲು ಸರ್ಕಾರವನ್ನು ಒತ್ತಾಯಿಸಿತ್ತು.
ಇದೀಗ ಝಾರ್ಖಂಡ್ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. 'ನಾವು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಿದ್ದೇವೆ. ಕೋವಿಡ್ 19 ಸಂದರ್ಭದಲ್ಲಿ ಅವರು ಅಗಾಧ ಸೇವೆ ಮಾಡಿದ್ದಾರೆ. ಅವರಿಗೆ ಸುಭದ್ರ ವಾತಾವರಣ ಒದಗಿಸಲು ಬದ್ಧರಾಗಿದ್ದೇವೆ' ಎಂದು ರಾಜ್ಯದ ಆರೋಗ್ಯ ಸಚಿವ ಬನ್ನಾ ಗುಪ್ತ ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.