ಕಾಬೂಲ್: ಭಾರತದೊಂದಿಗೆ ಉತ್ತಮ ಬಾಂಧವ್ಯ-ಸಂಬಂಧವನ್ನು ಬಯಸುವುದಾಗಿ ತಾಲೀಬಾನ್ ವಕ್ತಾರ ಝಬಿ-ಉಲ್ಲಾಹ್ ಮುಜಾಹಿದ್ ಹೇಳಿದ್ದಾರೆ.
ಪಾಕಿಸ್ತಾನದ ಎಆರ್ ವೈ ಸುದ್ದಿ ವಾಹಿನಿ ಈ ಹೇಳಿಕೆಯನ್ನು ವರದಿ ಮಾಡಿದ್ದು, ಆಫ್ಘಾನಿಸ್ತಾನದಲ್ಲಿ ಈಗ ಆಡಳಿತ ನಡೆಸುತ್ತಿರುವ ತಾಲೀಬಾನ್ ಭಾರತವನ್ನು ಈ ಪ್ರದೇಶದಲ್ಲಿ ಪ್ರಮುಖ ಭಾಗ ಎಂದು ಗುರುತಿಸುವುದಾಗಿ ಹೇಳಿಕೊಂಡಿದೆ.
"ಭಾರತವೂ ಸೇರಿದಂತೆ ಎಲ್ಲಾ ದೇಶಗಳೊಂದಿಗೂ ನಾವು ಉತ್ತಮ ಬಾಂಧವ್ಯದಲ್ಲಿರುವುದನ್ನು ಬಯಸುತ್ತೇವೆ. ಆದ್ದರಿಂದ ಭಾರತ ಆಫ್ಘಾನ್ ಜನರ ಹಿತಾಸಕ್ತಿಯ ದೃಷ್ಟಿಯಿಂದ ತನ್ನ ನೀತಿಯನ್ನು ರೂಪಿಸಲಿ ಎಂಬುದು ನಮ್ಮ ಆಶಯವಾಗಿದೆ" ಎಂದು ಮುಜಾಹಿದ್ ಹೇಳಿದ್ದಾರೆ.
ಆ.15 ರಂದು ಆಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಸ್ಥಾಪಿತವಾದ ಸರ್ಕಾರದಿಂದ ಅಧಿಕಾರವನ್ನು ಕಸಿದುಕೊಂಡು ತಾಲೀಬಾನ್ ಆ ರಾಷ್ಟ್ರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.
ನಾವು ನಮ್ಮ ನೆಲವನ್ನು ಬೇರೆ ರಾಷ್ಟ್ರದ ವಿರುದ್ಧ ಬಳಕೆ ಮಾಡಲು ಬಿಡುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದೆವು. ನಮ್ಮ ನೀತಿ ಸ್ಪಷ್ಟವಾಗಿದೆ ಎಂದು ಮುಜಾಹಿದ್ ತಿಳಿಸಿದ್ದಾರೆ.
ಇದೇ ವೇಳೆ ಭಾರತ-ಪಾಕ್ ಸಂಬಂಧಗಳ ಬಗ್ಗೆಯೂ ಮಾತನಾಡಿರುವ ಮುಜಾಹಿದ್, ಉಭಯ ದೇಶಗಳೂ ನೆರೆ ರಾಷ್ಟ್ರಗಳಾಗಿದ್ದು, ಹಿತಾಸಕ್ತಿಗಳು ಪರಸ್ಪರ ಸಂಬಂಧಿಸಿದ್ದಾಗಿರುತ್ತದೆ ಎಂದು ಹೇಳಿದ್ದಾರೆ.