ಕಾಸರಗೋಡು: ವನ್ಯಮೃಗಗಳ ಹಾವಳಿ ಎದುರಿಸುತ್ತಿರುವ ಪ್ರದೇಶಗಳಿಗೆ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್‍ಚಂದ್ ಭೇಟಿನೀಡಿ, ಅಲ್ಲಿನ ಕೃಷಿಕರಲ್ಲಿ ಭರವಸೆ ಮೂಡಿಸುವ ಕೆಲಸ ನಡೆಸಿದ್ದಾರೆ.
ಮುಳಿಯಾರ್ ಪಂಚಾಯಿತಿಯ ಮೂಡೇವೀಡ್, ಕಯ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾಧಿಕಾರಿ, ಕಾಡಾನೆ ಸೇರಿದಂತೆ ವನ್ಯಮೃಗಗಳ ಹಾವಳಿಯಿಂದ ಕೃಷಿನಾಶವುಂಟಾಗಿರುವ ಕೃಷಿಕರನ್ನು ಖುದ್ದಾಗಿ ಭೇಟಿಯಾಗಿ ಮಾಹಿತಿ ಸಂಗ್ರಹಿಸಿದರು. ಜಿಲ್ಲಾಡಳಿತ ವತಿಯಿಂದ ಕಾಡುಪ್ರಾಣಿಗಳ ಉಪಟಳ ನಿಯಂತ್ರಣಕ್ಕೆ ಕಾರ್ಯಯೋಜನೆ ತಯಾರಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಜನಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ, ಕಾಡುಪ್ರಾಣಿ ಉಪಟಳ ತಡೆಗಿರುವ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜತೆಗೆ ಆಗಸ್ಟ್ 27ರಂದು ಅರಣ್ಯ ಖಾತೆ ಸಚಿವ ಹಾಗೂ ಜಿಲ್ಲೆಯ ಶಾಸಕರು, ವನ್ಯಜೀವಿಗಳ ಉಪಟಳ ಹೊಂದಿರುವ ಪಂಚಾಯಿತಿಗಳ ಅಧ್ಯಕ್ಷರು, ಕೃಷಿಕ ಸಂಘಟನೆ ಪದಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲೀ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದೂ ತಿಳಿಸಿದರು.
ಮುಳಿಯಾರ್ ಗ್ರಾಪಂ ಅಧ್ಯಕ್ಷೆ ಪಿ.ವಿ ಮಿನಿ, ಉಪಾಧ್ಯಕ್ಷ ಎ.ಜನಾರ್ದನನ್ ಜಿಲ್ಲಾಧಿಕಾರಿ ಜತೆಗಿದ್ದರು. ಕಾಡಾನೆ ಸೇರಿದಂತೆ ವನ್ಯಮೃಗಗಳು ನಾಡಿಗಿಳಿದು ಕೃಷಿನಾಶಗೊಳಿಸುತ್ತಿರುವುದನ್ಗನು ಮನಗಂಡು ಜಿಲ್ಲಾಧಿಕಾರಿ ಸ್ಥಳಸಂದರ್ಶನ ನಡೆಸಿದ್ದರು.