ಕಾಸರಗೋಡು: ಕೋವಿಡ್ ಕಠಿಣ ನಿಬಂಧನೆ ನಡುವೆಯೂ ಕೇರಳದಲ್ಲಿ ಟಿಪಿಆರ್ ಸಂಖ್ಯೆ ಹೆಚ್ಚಾಗುತ್ತಿರುವ ಸನ್ನಿವೇಶ ಅತ್ಯಂತ ಗಂಭೀರವಾಗಿದ್ದು, ಈ ನಿಟ್ಟಿನಲ್ಲಿ ಮತ್ತಷ್ಟು ಕೋವಿಡ್ ಮುಂಚೂಣಿ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಾದ ಅನಿವಾರ್ಯತೆಯಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಆರೋಗ್ಯ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅತಿ ಶೀಘ್ರವಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ತರಬೇತಿ ಹೊಂದಿದ ಮತ್ತಷ್ಟು ಆರೋಗ್ಯ ಕಾರ್ಯಕರ್ತರನ್ನು ಸರ್ಕಾರ ತಯಾರುಗೊಳಿಸಬೇಕಾಗಿದೆ. ಮಹಾಮಾರಿ ಎದುರಿಸಲು ಬಿಜೆಪಿ ವತಿಯಿಂದ ದೇಶಾದ್ಯಂತ ಹತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿ ಅವರ ಮೂಲಕ ಆರೋಗ್ಯಸಂಬಂಧಿ ಸೇವೆ ನಡೆಸಲು ಪಕ್ಷ ಯತ್ನಿಸುತ್ತಿದೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ವಿಜಯ್ ರೈ, ವಕೀಲ ಎ. ಸದಾನಂದ ರೈ, ಎಂ. ಶೈಲಜಾ ಭಟ್ ಉಪಸ್ಥಿತರಿದ್ದರು.