ತಿರುವನಂತಪುರ: ಕೋವಿಡ್ ಮಾನದಂಡದೊಂದಿಗೆ ನಾಡಹಬ್ಬ ಓಣಂ ಆಗಸ್ಟ್ 21ರಂದು ಕೇರಳದ ಜನತೆ ಅಚರಿಸಲಿದ್ದಾರೆ. 'ಅತ್ತಂ ಪತ್ತ್ ಪೊನ್ನೋಣಂ'ಎಂಬಂತೆ ಓಣಂ ಆರಂಭಗೊಂಡ ಹತ್ತನೇ ದಿನ ತಿರುವೋಣಂ ಆಚರಿಸಲಾಗುತ್ತಿದೆ. ತಿರುವೋಣಂ ಹಬ್ಬದ ಖರೀದಿಗಾಗಿ ಉತ್ರಾಡಂ ದಿನವಾದ ಶುಕ್ರವಾರ ಕಾಸರಗೋಡು ಸೇರಿದಂತೆ ಪೇಟೆಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು. ಕರೊನಾ ನಿಬಂಧನೆಗಳಲ್ಲಿ ಆ. 28ರ ವರೆಗೆ ಕೆಲವೊಂದು ವಿನಾಯಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿವಸಗಳಿಂದ ಮಾರುಕಟ್ಟೆ ಸಕ್ರಿಯವಾಗಿತ್ತು.
ಓಣಂ ಹಬ್ಬ ಹೂವಿನ ಹಬ್ಬವೆಂದೇ ಪರಿಗಣಿಸಲಾಗುತ್ತಿದ್ದು, ಇತರ ರಾಜ್ಯಗಳಿಂದ ಆಗಮಿಸಿದ ಹೂವಿನ ವ್ಯಾಪಾರಿಗಳು ಶುಕ್ರವಾರ ಬಿರುಸಿನಬ ವ್ಯಾಪಾರ ನಡೆಸಿದರು. ಕರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಭ್ರಮ ಕೈಬಿಟ್ಟಿರುವ ಜನತೆ ಸರಳವಾಗಿ ಆಚರಿಸಲು ತೀರ್ಮಾನಿಸಿರುವುದರಿಂದ ಈ ಬಾರಿ ಹೂವಿನ ವ್ಯಾಪಾರದಲ್ಲೂ ಇಳಿಕೆ ಕಂಡುಬಂದಿತ್ತು.