ನವದೆಹಲಿ: ಭಾರತದಲ್ಲಿ ಎಲ್ಲಿಯೇ ವಾಸವಾಗಿರುವ ಮತ್ತು ಮುಕ್ತವಾಗಿ ಸಂಚರಿಸುವ ವ್ಯಕ್ತಿಯ ಮೂಲಭೂತ ಹಕ್ಕನ್ನು ಕ್ಷುಲ್ಲಕ ಕಾರಣಗಳಿಂದ ನಿರಾಕರಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದಿದೆ.
ಮಹಾರಾಷ್ಟ್ರ ಪೊಲೀಸರು ಪತ್ರಕರ್ತ ರಹಮತ್ ಖಾನ್ ವಿರುದ್ಧ ಹೊರಡಿಸಿರುವ ಗಡಿಪಾರು ಆದೇಶದ ವಿಚಾರಣೆಯನ್ನು ಶನಿವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ.ಬಾಲಸುಬ್ರಮಣಿಯನ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಮಹಾರಾಷ್ಟ್ರ ಪೊಲೀಸರ ಆದೇಶವು ಖಾನ್ ಅವರು ಒಂದು ವರ್ಷದವರೆಗೆ ಅಮರಾವತಿ ನಗರವನ್ನು ಪ್ರವೇಶಿಸುವುದನ್ನು ನಿಷೇಧಿಸಿದೆ.
ಅಮರಾವತಿಯ ಮದ್ರಸಗಳಲ್ಲಿ ಸಾರ್ವಜನಿಕ ಹಣ ಮತ್ತು ಸರಕಾರಿ ಅನುದಾನಗಳ ದುರುಪಯೋಗದ ವಿರುದ್ಧ ಖಾನ್ ಆರ್ಟಿಐ ಕಾಯ್ದೆಯಡಿ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದರು. 2017,ಅ.3ರಂದು ಅವರು ಈ ವಿಷಯದ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸರನ್ನು ಕೋರಿಕೊಂಡಿದ್ದರಲ್ಲದೆ,ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ದಾಖಲಿಸಿದ್ದರು.
ಆದರೆ ಮದ್ರಸಗಳ ಚಟುವಟಿಕೆಗಳನ್ನು ಬಯಲಿಗೆಳೆಯುವುದಾಗಿ ಬೆದರಿಕೆಯ ನೆಪದಲ್ಲಿ ಹಫ್ತಾ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಖಾನ್ ವಿರುದ್ಧವೇ ಎಫ್‌ಐಆರ್ಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಕಲಂ 56ರಡಿ ಅವರ ಗಡಿಪಾರು ಆದೇಶವನ್ನು ಹೊರಡಿಸಲಾಗಿತ್ತು.
ಖಾನ್ ದೂರುಗಳನ್ನು ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ ನ್ಯಾಯಾಲಯವು,ಇವು ಪ್ರತೀಕಾರ ಕ್ರಮಗಳಾಗಿವೆ ಎಂದು ಬಣ್ಣಿಸಿತು.
ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ 56ರಿಂದ 59ರವರೆಗಿನ ಕಲಮ್ಗಳು ನಿರ್ದಿಷ್ಟವಾಗಿ ನ್ಯಾಯಾಲಯದಲ್ಲಿ ವಿಚಾರಣೆಯ ಬಳಿಕ ದಂಡನೆಯಿಂದ ನುಣುಚಿಕೊಳ್ಳುವ ಸಮಾಜ ವಿರೋಧಿ ಶಕ್ತಿಗಳಿಗೆ ಅನ್ವಯವಾಗುತ್ತವೆ. ಕೆಲವೊಮ್ಮೆ ಗಡಿಪಾರು ಆದೇಶ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಬಹುದು,ಆದರೆ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇಂತಹ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು,ಖಾನ್ ವಿರುದ್ಧದ ಆರೋಪಗಳು ನಿಜವೇ ಆಗಿದ್ದರೂ ಗಡಿಪಾರು ಆದೇಶವನ್ನು ಹೊರಡಿಸಬಾರದಿತ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ದೂರುದಾರರು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರದಿದ್ದರೆ ಖಾನ್ ಅವರು ಒಡ್ಡಿದ್ದರೆನ್ನಲಾದ ಬೆದರಿಕೆಗಳಿಗೆ ಅವರು ಕಳವಳಪಡಬೇಕಾದ ಕಾರಣವೇ ಇರಲಿಲ್ಲ ಎಂದೂ ನ್ಯಾಯಾಲಯವು ಹೇಳಿತು.