ದಿಸ್ಪುರ್: ಅಸ್ಸಾಂ ಜೊತೆ ಹೊಂದಿಕೊಂಡಿರುವ ಗಡಿಯಲ್ಲಿ ಮೇಘಾಲಯವು ಡ್ರೋನ್ ಮೂಲಕ ಸಮೀಕ್ಷೆ ನಡೆಸಿರುವುದು ಸ್ಥಳೀಯರಲ್ಲಿ ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು.
ಅಸ್ಸಾಂನ ಖಾನಪರ ಪ್ರದೇಶದಲ್ಲಿ ಮೇಘಾಲಯ ಡ್ರೋನ್ ಮೂಲಕ ಶನಿವಾರ ಗಡಿ ಸಮೀಕ್ಷೆ ನಡೆಸಿದೆ. ಇದು ಸ್ಥಳೀಯರ ಗೊಂದಲಕ್ಕೆ ಕಾರಣವಾಗಿತ್ತು.
ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಪರಸ್ಪರ ಮಾತುಕತೆ ನಡೆಸಿದ ಮರುದಿನವೇ ಈ ವಿದ್ಯಮಾನ ನಡೆದಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.
ಕಮರುಪ್ ಮಹಾನಗರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ಅಸ್ಸಾಂ ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ ಎಂದು 'ಪಿಟಿಐ' ವರದಿ ಮಾಡಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಎರಡು ರಾಜ್ಯಗಳು ಡ್ರೋನ್‌ಗಳ ಸಹಾಯದಿಂದ ಅಥವಾ ಇತರ ಸಾಧನಗಳ ಮೂಲಕ ಗಡಿ ಸಮೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಮರುಪ್‌ನ ಮಹಾನಗರ ಪಾಲಿಕೆಯ ಜಿಲ್ಲಾಧಿಕಾರಿ ಬಿಸ್ವಜಿತ್ ಪೆಗು ತಿಳಿಸಿದ್ದಾರೆ.
'ಸ್ಥಳೀಯರಲ್ಲಿ ಸ್ವಲ್ಪ ಗೊಂದಲವಿದೆ. ಡ್ರೋನ್ ಸಮೀಕ್ಷೆಯಿಂದ ವಿಚಲಿತರಾಗಿದ್ದರು. ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಎಲ್ಲರಿಗೂ ವಿವರವಾಗಿ ತಿಳಿಸಿದ್ದಾರೆ' ಎಂದು ಬಿಸ್ವಜಿತ್ ಹೇಳಿದ್ದಾರೆ.
ಉಭಯ ರಾಜ್ಯಗಳ ನಡುವೆ ಗಡಿ ವಿವಾದ ಸಮಾನ್ಯವೆಂಬಂತಿದ್ದು, ಇತ್ತೀಚೆಗೆ ಜುಲೈ 26ರಂದು ಇಂತಹದ್ದೇ ವರದಿಯಾಗಿತ್ತು.