ಶ್ರೀನಗರ: ಕಲ್ಲು ತೂರಾಟ ಅಥವಾ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲರಿಗೂ ಪಾಸ್ ಪೋರ್ಟ್ ಮತ್ತಿತರ ಸರ್ಕಾರಿ ಸೇವೆಗಳಿಗೆ ಅಗತ್ಯವಾದ ಸೆಕ್ಯೂರಿಟಿ ಕ್ಲಿಯರೆನ್ಸ್ ನೀಡದಿರಲು ಜಮ್ಮು ಮತ್ತು ಕಾಶ್ಮೀರದ ಸಿಐಡಿ ಘಟಕ ಮತ್ತು ಪೊಲೀಸರು ಆದೇಶಿಸಿದ್ದಾರೆ.
ಪಾಸ್ ಪೋರ್ಟ್, ಸರ್ಕಾರದ ಸೇವೆಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ವೇಳೆಯಲ್ಲಿ ಕಲ್ಲು ತೂರಾಟ ಪ್ರಕರಣಗಳು ಮತ್ತಿತರ ರಾಜ್ಯದ ಭದ್ರತೆಗೆ ಸಂಬಂಧಿಸಿದ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪರಿಶೀಲಿಸುವಂತೆ ಕಾನೂನು ಸುವ್ಯವಸ್ಥೆ ಪಾಲಕರಿಗೆ ಕಾಶ್ಮೀರದ ಹಿರಿಯ ಪೊಲೀಸ್ ಮಹಾನಿರ್ದೇಶಕರು, ಸಿಐಡಿ, ವಿಶೇಷ ಬ್ರಾಂಚ್ ಶನಿವಾರ ಆದೇಶ ಹೊರಡಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆ ದಾಖಲೆಗಳಿಂದ ಇದನ್ನು ದೃಢೀಕರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪೊಲೀಸ್ ದಾಖಲೆಗಳು, ಪೊಲೀಸರು, ಭದ್ರತಾ ಪಡೆ ಮತ್ತು ಭದ್ರತಾ ಏಜೆನ್ಸಿಗಳ ದಾಖಲೆಗಳಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳು, ಫೋಟೋಗಳು, ವಿಡಿಯೋಗಳು ಮತ್ತು ಆಡಿಯೋ ಕ್ಲಿಪ್ ಗಳಂತಹ ಡಿಜಿಟಲ್ ಪುರಾವೆಗಳನ್ನು ಸಹ ಪರಿಶೀಲನೆಯ ಸಮಯದಲ್ಲಿ ಉಲ್ಲೇಖಿಸಲಾಗುತ್ತದೆ ಎಂದು ಎಸ್‌ಎಸ್‌ಪಿ ಹೇಳಿದೆ.