ಹರಿದ್ವಾರ್ : ಈ ವರ್ಷ ನಡೆದ ಕುಂಭ ಮೇಳದ ಸಂದರ್ಭ ಕೋವಿಡ್-19 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಂಚನೆಗೈದ ಆರೋಪದ ಮೇಲೆ ಖಾಸಗಿ ಏಜನ್ಸಿಯೊಂದರ ಹಾಗೂ ಲ್ಯಾಬ್ ಒಂದರ ಮಾಲಕರ ವಿರುದ್ಧ ಹರಿದ್ವಾರ್ ಜಿಲ್ಲೆಯ ನ್ಯಾಯಾಲಯವೊಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಎಪ್ರಿಲ್ 1ರಿಂದ 30ರ ತನಕ ನಡೆದ ಕುಂಭ ಮೇಳದಲ್ಲಿ ಭಾಗವಹಿಸಲು ಆಗಮಿಸುವ ಭಕ್ತರ ಕೋವಿಡ್ ಪರೀಕ್ಷೆ ನಡೆಸಲು ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಸ್ ಎಂಬ ನೊಯ್ಡಾ ಮೂಲದ ಖಾಸಗಿ ಏಜನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಈ ಏಜನ್ಸಿಯು ಹರ್ಯಾಣಾದ ಹಿಸಾರ್ ಜಿಲ್ಲೆಯ ನಲ್ವಾ ಲ್ಯಾಬ್ಸ್ ಹಾಗೂ ದಿಲ್ಲಿ ಮೂಲದ ಲಾಲ್‍ಚಂದಾನಿ ಲ್ಯಾಬ್ಸ್ ಗೆ ನಂತರ ಹೊರಗುತ್ತಿಗೆ ವಹಿಸಿತ್ತು.
ಯಾವುದೇ ಕೋವಿಡ್ ಪರೀಕ್ಷೆ ನಡೆಸದೆ ಈ ಮೂರು ಸಂಸ್ಥೆಗಳ ಸಹಿತ ಇನ್ನೂ ಎರಡು ಸಂಸ್ಥೆಗಳು ನಕಲಿ ಎಂಟ್ರಿಗಳು ಹಾಗೂ ಬೋಗಸ್ ಬಿಲ್‍ಗಳನ್ನು ಸೃಷ್ಟಿಸಿವೆ ಎಂದು ಆರೋಪಿಸಲಾಗಿತ್ತು. ಈ ಆರೋಪ ಕುರಿತಂತೆ ವಿಶೇಷ ತನಿಖಾ ತಂಡವೊಂದೂ ತನಿಖೆ ನಡೆಸುತ್ತಿದೆ.
ಖಾಸಗಿ ಲ್ಯಾಬ್‍ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಾಖಂಡ ಸರಕಾರ ಜೂನ್ ತಿಂಗಳಲ್ಲಿ ಹರಿದ್ವಾರ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಶನಿವಾರ ನ್ಯಾಯಾಲಯವು ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಸ್‍ನ ಇಬ್ಬರು ಪಾಲುದಾರರಾದ ಶರತ್ ಪಂತ್ ಮತ್ತು ಮಲ್ಲಿಕಾ ಪಂತ್, ನಲ್ವಾ ಲ್ಯಾಬ್ಸ್ ಪಾಲುದಾರ ನವತೇಜ್ ನಲ್ವಾ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದೆ. ಹರ್ಯಾಣ, ಉತ್ತರ ಪ್ರದೇಶ ಮತ್ತು ದಿಲ್ಲಿಯಲ್ಲಿನ ಆರೋಪಿತರ ಸಂಸ್ಥೆಗಳ ಮೇಲೆ ಪೊಲೀಸ್ ದಾಳಿ ನಡೆಸಲು ತಂಡಗಳನ್ನು ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆಬೀಸಿದ್ದಾರೆ.