ನವದೆಹಲಿ: 'ಕಾಂಗ್ರೆಸ್ ಈಗ ಕಣ್ಮುಚ್ಚಿಕೊಂಡು ಮುನ್ನಡೆಯುತ್ತಿದೆ' ಎಂದು ಪಕ್ಷದ ಹಿರಿಯ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಕಪಿಲ್ ಸಿಬಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.
'ಯುವಕರು ಪಕ್ಷ ತೊರೆಯುತ್ತಿದ್ದಾರೆ. ಪಕ್ಷವನ್ನು ಬಲಪಡಿಸಲು ಯತ್ನಿಸುತ್ತಿರುವ ಹಳಬರಾದ ನಮ್ಮನ್ನು ದೂಷಿಸಲಾಗುತ್ತಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
'ಸಮಾನ ಮನಸ್ಕ ಪಕ್ಷಗಳನ್ನು ಒಗ್ಗೂಡಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೈಗೊಂಡ ಕ್ರಮಗಳಿಂದ ನನಗೆ ಸಂತೋಷವಾಗಿದೆ. ಆದರೆ, ಪಕ್ಷವನ್ನು ಬಲಪಡಿಸಲು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲೇಬೇಕು ಎನ್ನುವ ನಮ್ಮ ಒತ್ತಾಯವನ್ನು ಮತ್ತೊಮ್ಮೆ ಹೇಳುತ್ತೇವೆ' ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
'ಪಕ್ಷಕ್ಕೆ ಪುನಶ್ಚೇತನ ಮತ್ತು ಹೊಸತನ ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಪ್ರಯತ್ನಗಳನ್ನು ನಾನು ಮತ್ತು ಪಕ್ಷದ ಮುಖಂಡರು ಬೆಂಬಲಿಸುತ್ತೇವೆ' ಎಂದು ಅವರು ಹೇಳಿದ್ದಾರೆ.
'ಕಾಂಗ್ರೆಸ್ ಬಲಪಡಿಸದೆಯೇ ವಿರೋಧ ಪಕ್ಷಗಳಲ್ಲಿ ಒಗ್ಗಟ್ಟು ಮೂಡಿಸಲು ಸಾಧ್ಯವಿಲ್ಲ. ಹೀಗಾಗಿ, ಪಕ್ಷಕ್ಕೆ ಪುನಶ್ಚೇತನ ನೀಡಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದೇನೆ. ಒಂದು ವೇಳೆ ಸೋನಿಯಾ ಗಾಂಧಿ ಅವರ ಕಾರ್ಯಗಳಿಗೆ ಅಡ್ಡಿಯಾಗಿದ್ದರೆ ನನ್ನನ್ನು ಸಹ ಹೊರಗೆ ಹಾಕಬಹುದು' ಎಂದು ತಿಳಿಸಿದ್ದಾರೆ.
'ಕಾಂಗ್ರೆಸ್ ತನ್ನ ಮಹತ್ವವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ತಿಳಿದುಕೊಳ್ಳಬೇಕಾಗಿದೆ' ಎಂದು ಹೇಳಿದ್ದಾರೆ.