ಪಾಲಕ್ಕಾಡ್: ಜಿಲ್ಲಾ ಕಾಂಗ್ರೆಸ್ ಸಮಿತಿಯ(ಡಿಸಿಸಿ) ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು, ಕಾಂಗ್ರೆಸ್‌ನ ಮಾಜಿ ಶಾಸಕ ಎ.ವಿ ಗೋಪಿನಾಥ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, 'ಕಳೆದ ಐದು ದಶಕದಿಂದ ಪಕ್ಷದ ಪ್ರಗತಿಗಾಗಿ ಶ್ರಮಿಸಿದ್ದೇನೆ. ನಾನು ಪಕ್ಷಕ್ಕೆ ಅಡಚಣೆಯಾಗಲು ಇಚ್ಛಿಸುವುದಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದೊಂದಿಗಿನ 50 ವರ್ಷದ ಒಡನಾಟವನ್ನು ಕೊನೆಗೊಳಿಸುತ್ತಿದ್ದೇನೆ' ಎಂದರು.
ಗೋಪಿನಾಥ್ ಅವರು ಪಾಲಕ್ಕಾಡ್ ಡಿಸಿಸಿಯ ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿಯ ಸದಸ್ಯರಾಗಿದ್ದಾರೆ.
ಡಿಸಿಸಿಯ ಅಧ್ಯಕ್ಷ ಸ್ಥಾನವನ್ನು ಗೋಪಿನಾಥ್‌ಗೆ ನೀಡುವಂತೆ ಅವರ ಬೆಂಬಲಿಗರು ಒತ್ತಾಯಿಸಿದ್ದರು. ಆದರೆ ಆ ಸ್ಥಾನವನ್ನು ಎ.ತಂಕಪ್ಪ ಅವರಿಗೆ ನೀಡಲಾಯಿತು. ಅಲ್ಲದೆ, ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಗೋಪಿನಾಥ್‌ಗೆ ಟಿಕೆಟ್ ಅನ್ನು ನೀಡಲು ಪಕ್ಷ ನಿರಾಕರಿಸಿತ್ತು. ಇದನ್ನು ವಿರೋಧಿಸಿ ಅವರು ಪ್ರತಿಭಟಿಸಿದ್ದರು.
ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿತ್ತಲ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಡಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ತಮ್ಮೊಂದಿಗೆ ಚರ್ಚೆ ನಡೆಸಿಲ್ಲ ಎಂದು ಅವರಿಬ್ಬರೂ ದೂರಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಗೋಪಿನಾಥ್ ಹೇಳಿದ್ದಾರೆ.