ವಾಷಿಂಗ್ಟನ್ : ಕೊರೊನಾ ಪಾಸಿಟಿವ್ ಇದ್ದವರು ಮಗುವಿಗೆ ಹಾಲುಣಿಸಬಹುದೇ? ಹಾಲುಣಿಸುತ್ತಿರುವ ತಾಯಂದಿರು ಕೊರೊನಾ ಲಸಿಕೆ ಪಡೆದುಕೊಳ್ಳಬಹುದೇ? ಲಸಿಕೆಯಿಂದ ಮಗುವಿಗೆ ಸಮಸ್ಯೆಯಾಗುವುದೇ ಅಥವಾ ಲಸಿಕೆ ಮಗುವಿಗೆ ಹೇಗೆ ರಕ್ಷಣೆ ನೀಡಬಹುದು? ಎಂಬಿತ್ಯಾದಿ ಪ್ರಶ್ನೆಗಳಿಗೆ ಈಚೆಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿತ್ತು.
ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಳ್ಳುವುದು ಅವಶ್ಯಕ, ಇದು ಮಗುವಿನ ಆರೋಗ್ಯಕ್ಕೂ ಪೂರಕ ಎಂದು ಹೇಳಿತ್ತು. ಹಾಲುಣಿಸುತ್ತಿರುವ ತಾಯಂದಿರು ತಪ್ಪದೇ ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಕರೆ ನೀಡಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕದಲ್ಲಿ ಸಂಶೋಧನೆಯೊಂದು ಎದೆಹಾಲಿನ ಮಹತ್ವದ ಕುರಿತು ತಿಳಿಸಿದೆ.
ತಾಯಂದಿರು ಲಸಿಕೆ ಪಡೆದುಕೊಳ್ಳುವುದು ಎಷ್ಟು ಅವಶ್ಯಕ ಎಂಬುದನ್ನೂ ಹೇಳಿದೆ. ಕೊರೊನಾ ಲಸಿಕೆಯನ್ನು ಪಡೆದುಕೊಂಡ ತಾಯಂದಿರ ಎದೆಹಾಲಿನಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿದ್ದು, ಇದು ಮಗುವನ್ನು ಅನಾರೋಗ್ಯಕ್ಕೆ ಈಡಾಗುವುದನ್ನು ತಪ್ಪಿಸಲು ಸಹಕಾರಿ ಎಂದು ಅಧ್ಯಯನ ತಿಳಿಸಿದೆ.
'ಬ್ರೆಸ್ಟ್‌ಫೀಡಿಂಗ್ ಮೆಡಿಸಿನ್' ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆಯು ಸ್ತನ್ಯಪಾನ ಮಾಡುವ ತಾಯಂದಿರು ಲಸಿಕೆ ಪಡೆದುಕೊಳ್ಳಲು ಸಲಹೆ ನೀಡುತ್ತಾ, ಇದು ತಾಯಿ ಹಾಗೂ ಮಗು ಇಬ್ಬರ ರಕ್ಷಣೆಗೂ ಅತ್ಯುತ್ತಮ ಎಂದು ಹೇಳಿದೆ.
'ನಮ್ಮ ಸಂಶೋಧನೆಯು, ಕೊರೊನಾ ಲಸಿಕೆಯಿಂದ ತಾಯಂದಿರ ಎದೆಹಾಲಿನಲ್ಲಿ ಸೋಂಕಿನ ವಿರುದ್ಧ ಪ್ರತಿಕಾಯಗಳು ಗಣನೀಯವಾಗಿ ಏರಿಕೆಯಾಗಿರುವುದನ್ನು ತೋರಿಸುತ್ತಿದೆ. ಲಸಿಕೆ ಪಡೆದುಕೊಂಡ ತಾಯಂದಿರು ತಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಎದೆಹಾಲಿನ ಮೂಲಕ ಮಗುವಿಗೆ ವರ್ಗಾಯಿಸುತ್ತಾರೆ ಎಂಬುದನ್ನು ಸೂಚಿಸುತ್ತಿದೆ' ಎಂದು ಅಧ್ಯಯನದ ಹಿರಿಯ ಲೇಖಕ ಹಾಗೂ ಫ್ಲೋರಿಡಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಜೋಸೆಫ್ ಲಾರ್ಕಿನ್ ಹೇಳಿದರು.
ಈ ಅಧ್ಯಯನವನ್ನು ಡಿಸೆಂಬರ್ 2020 ಹಾಗೂ ಮಾರ್ಚ್ 2021ರ ನಡುವೆ ನಡೆಸಲಾಗಿದೆ. ಫೈಜರ್ ಹಾಗೂ ಮಾಡೆರ್ನಾ ಲಸಿಕೆಯನ್ನು ಮೊದಲ ಬಾರಿಗೆ ಅಮೆರಿಕದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿತ್ತು. ಈ ಸಂಶೋಧನೆಯು ಕೊರೊನಾ ಸೋಂಕಿಗೆ ತುತ್ತಾಗದ, 21 ಆರೋಗ್ಯ ಕಾರ್ಯಕರ್ತರನ್ನು (ಎದೆಹಾಲುಣಿಸುವ ತಾಯಂದಿರನ್ನು) ಒಳಗೊಂಡಿತ್ತು. ಈ ಅವಧಿಯಲ್ಲಿ ಲಸಿಕೆ ಪಡೆದುಕೊಂಡಿದ್ದ ತಾಯಿಯ ಎದೆಹಾಲು ತಾಯಿಗೆ ಹಾಗೂ ಮಗುವಿಗೆ ರೋಗನಿರೋಧಕ ಶಕ್ತಿಯನ್ನು ನೀಡಿದ್ದು ಕಂಡುಬಂದಿತ್ತು ಎಂದು ಸಹ ಲೇಖಕ ಜೋಸೆಫ್ ನಿಯೂ ತಿಳಿಸಿದ್ದಾರೆ.
'ಮಗುವಿನ ಜೀವನವಿಡೀ ಆರೋಗ್ಯಕ್ಕೆ ಪುಷ್ಟಿ ನೀಡುವ, ವಿಭಿನ್ನ ಪರಿಕರಗಳಿಂದ ತುಂಬಿರುವ ಟೂಲ್‌ಬಾಕ್ಸ್‌ನಂತೆ ತಾಯಿಯ ಎದೆಹಾಲಿರುತ್ತದೆ. ಈ ಲಸಿಕೆ ಆ ಟೂಲ್‌ಬಾಕ್ಸ್‌ಗೆ ಮತ್ತೊಂದು ಸಾಧನವನ್ನು ಸೇರಿಸುತ್ತದೆ. ಇದು ಮಗುವಿನಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಅತಿ ಪರಿಣಾಮಕಾರಿಯಾಗಿದೆ' ಎಂದು ವಿವರಿಸಿದರು ನಿಯೂ.
ಎರಡನೇ ಡೋಸ್ ಲಸಿಕೆ ಪಡೆದುಕೊಂಡ ನಂತರ ತಾಯಿಯ ರಕ್ತ ಹಾಗೂ ಎದೆಹಾಲಿಯಲ್ಲಿ ಬಲಿಷ್ಠವಾದ ಪ್ರತಿಕಾಯ ಪ್ರತಿಕ್ರಿಯೆಯನ್ನು ಕಂಡುಕೊಂಡಿದ್ದೇವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಲಸಿಕೆ ಪಡೆದುಕೊಳ್ಳುವ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ, ಪ್ರತಿಕಾಯ ಮಟ್ಟ ಸುಮಾರು ನೂರು ಪಟ್ಟು ಹೆಚ್ಚಾಗಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ' ಎಂದು ಅವರು ತಿಳಿಸಿದ್ದಾರೆ.
ತಾಯಿಯ ಎದೆಹಾಲು ಮಗುವಿಗೆ ತನ್ನ ಜೀವನದ ಮೊದಲ ಆರು ತಿಂಗಳು ಆಹಾರದ ಏಕೈಕ ಮೂಲವಾಗಿದೆ. ಜೊತೆಗೆ ಈ ಅವಧಿಯಲ್ಲಿ ಲಸಿಕೆ ಪಡೆದುಕೊಂಡ ತಾಯಂದಿರಿಂದ ಮಗುವಿಗೂ ಹೆಚ್ಚಿನ ಶಕ್ತಿ ಲಭಿಸಲಿದೆ ಎಂದು ಹೇಳಿದ್ದಾರೆ.
ಸಿಕೆ ಪಡೆದ ಕಾರಣಕ್ಕೆ ಸ್ತನ್ಯಪಾನವನ್ನು ನಿರ್ಬಂಧಿಸುವ ಅಗತ್ಯವಿಲ್ಲ. ಕೋವಿಡ್ ಲಸಿಕೆಯು ತಾಯಿಯ ಆರೋಗ್ಯಕ್ಕೆ ಮಾತ್ರವಲ್ಲದೇ, ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ಲಸಿಕೆಯನ್ನು ಪಡೆದುಕೊಂಡ ನಂತರ ತಾಯಿಯ ದೇಹದಲ್ಲಿ ಬೆಳವಣಿಗೆಯಾಗುವ ಪ್ರತಿಕಾಯಗಳು ಮಗುವಿನ ಹಾಲಿನೊಂದಿಗೆ ವರ್ಗಾವಣೆಯಾಗುತ್ತವೆ. ಇದರಿಂದ ಮಗುವಿಗೂ ಕೋವಿಡ್ ವಿರುದ್ಧ ರಕ್ಷಣೆ ದೊರೆಯುತ್ತದೆ ಎಂಬ ಅಂಶವನ್ನು ಭಾರತ ಸರ್ಕಾರವೂ ಉಲ್ಲೇಖಿಸಿ, ಎದೆಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಳ್ಳುವಂತೆ ಪ್ರೋತ್ಸಾಹಿಸಿತ್ತು.