ಮಸ್ಸೂರಿ : ಇಂಡೊ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗೆ ಇದೇ ಮೊದಲ ಬಾರಿ ಇಬ್ಬರು ಮಹಿಳಾ ಅಧಿಕಾರಿಗಳು ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಲು ಸೇರ್ಪಡೆಗೊಂಡಿದ್ದಾರೆ.
ಇಲ್ಲಿನ ಐಟಿಬಿಪಿ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಪ್ರಕೃತಿ ಮತ್ತು ದೀಕ್ಷಾ ಸೇರಿದಂತೆ ಒಟ್ಟು 53 ಅಧಿಕಾರಿಗಳು ತರಬೇತಿಯನ್ನು ಪೂರೈಸಿದರು. ಭಾನುವಾರ ಈ ಅಧಿಕಾರಿಗಳ ನಿರ್ಗಮನ ಪಥಸಂಚಲನ ನಡೆಯಿತು.
ಐಟಿಬಿಪಿ ಮಹಾನಿರ್ದೇಶಕ ಎಸ್.ಎಸ್. ದೇಸ್ವಾಲ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಘ್ ಧಾಮಿ ಅವರು ಪೃಕೃತಿ ಮತ್ತು ದಿಕ್ಷಾ ಅವರ ಭುಜದ ಮೇಲೆ 'ಅಸಿಸ್ಟಂಟ್ ಕಮಾಂಡಂಟ್' ರ್‍ಯಾಂಕ್‌ಗೆ ಸಂಬಂಧಿಸಿದ ಪಟ್ಟಿಯನ್ನು ಲಗತ್ತಿಸಿದರು. 'ಅಸಿಸ್ಟಂಟ್ ಕಮಾಂಡಂಟ್' ಐಟಿಬಿಪಿಯಲ್ಲಿ ಆರಂಭದ ಹಂತದ ಹುದ್ದೆಯಾಗಿದೆ.
ಪ್ರಕೃತಿಯ ತಂದೆ ಭಾರತೀಯ ವಾಯು ಪಡೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ದೀಕ್ಷಾ ತಂದೆ ಕಮಲೇಶ್ ಕುಮಾರ್ ಐಟಿಬಿಪಿಯಲ್ಲಿ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಖಾಕಿ ಸಮವಸ್ತ್ರದಲ್ಲಿದ್ದ ಕಮಲೇಶ್ ಕುಮಾರ್ ಅವರು, ಪಥಸಂಚಲನದ ಬಳಿಕ ತಮ್ಮ ಮಗಳಿಗೆ ಸಲ್ಯೂಟ್ ಹೊಡೆದಾಗ ದೀಕ್ಷಾ ಸಹ ಪ್ರತಿ ಸಲ್ಯೂಟ್ ಹೊಡೆದರು.
'ತಂದೆಯೇ ನನಗೆ ಮಾದರಿ. ಯಾರಿಗಿಂತಲೂ ಕಡಿಮೆ ಇಲ್ಲ ಎಂದು ನನ್ನನ್ನು ಪರಿಗಣಿಸಿದ್ದರು. ಎಲ್ಲ ರೀತಿಯ ಮಾರ್ಗದರ್ಶನ ಮಾಡಿದ್ದಾರೆ' ಎಂದು ದೀಕ್ಷಾ ಪ್ರತಿಕ್ರಿಯಿಸಿದರು.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಪ್ರಕೃತಿ, 'ಭದ್ರತಾ ಪಡೆಗಳಲ್ಲಿ ಕಾರ್ಯನಿರ್ವಹಿಸುವುದು ಸವಾಲಿನ ಕೆಲಸ. ಇದು ಅತ್ಯಂತ ಕಠಿಣ ಕಾರ್ಯವೂ ಹೌದು' ಎಂದು ಹೇಳಿದರು.
ಅಖಿಲ ಭಾರತ ಮಟ್ಟದ ಪರೀಕ್ಷೆ ಮೂಲಕ ಯುದ್ಧ ಕಾರ್ಯಾಚರಣೆಯ ಕಾರ್ಯಕ್ಕೂ ಮಹಿಳಾ ಅಧಿಕಾರಿಗಳನ್ನು 2016ರಿಂದ ಐಟಿಬಿಪಿಗೆ ಸೇರ್ಪಡೆ ಮಾಡಿಕೊಳ್ಳುವುದನ್ನು ಆರಂಭಿಸಲಾಯಿತು. ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಈ ಪರೀಕ್ಷೆ ನಡೆಸುತ್ತದೆ. ಇದಕ್ಕಿಂತ ಮೊದಲು ಕಾನ್‌ಸ್ಟೆಬಲ್ ಹುದ್ದೆಯಲ್ಲಿ ಮಾತ್ರ ಮಹಿಳೆಯರನ್ನು ಸೇರಿಸಿಕೊಳ್ಳಲಾಗುತ್ತಿತ್ತು.