ನವದೆಹಲಿ : ಸಂಸತ್ತಿನಲ್ಲಿ ಉಂಟಾಗಿರುವ ಕಹಿ ವಾತಾವರಣವನ್ನು ಸರ್ಕಾರ ಮತ್ತು ವಿರೋಧ ಪಕ್ಷಗಳು ಒಟ್ಟಾಗಿ ಪರಿಹರಿಸಿಕೊಳ್ಳುವಂತೆ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಆಗ್ರಹಿಸಿದ್ದಾರೆ. ಈ ಬಗ್ಗೆ ಇಂದು ರಾಜ್ಯಸಭೆಯ ಕಲಾಪವನ್ನು ಮೊದಲ ಬಾರಿಗೆ ಮುಂದೂಡಿದ ನಂತರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಾಯ್ಡು ಚರ್ಚಿಸಿದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಸೋಮವಾರ ಸಂಜೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಷಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭೆಯ ನಾಯಕ ಪಿಯೂಶ್ ಗೋಯಲ್ ಅವರುಗಳೊಂದಿಗೆ ಕೂಡ ಸಭೆ ನಡೆಸಿ ನಾಯ್ಡು ಅವರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಜುಲೈ 19 ರಂದು ಕಲಾಪಗಳು ಆರಂಭವಾದಾಗಿನಿಂದ ಕಳೆದ ಎರಡು ವಾರಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕಲಾಪಗಳು ಸುಸೂತ್ರವಾಗಿ ನಡೆಯುತ್ತಿಲ್ಲ. ಈ ಕಾರಣಕ್ಕೆ ಸರ್ಕಾರ ಮತ್ತು ವಿಪಕ್ಷಗಳು ಪರಸ್ಪರ ಮಾತನಾಡಿ, ಸೌಹಾರ್ದಯುತ ಪರಿಹಾರವನ್ನು ಹುಡುಕಬೇಕು ಎಂದು ನಾಯ್ಡು ಒತ್ತಾಯಿಸಿದ್ದಾರೆ ಎನ್ನಲಾಗಿದೆ.