ಕಾಬೂಲ್: ಪಂಜ್ ಶೀರ್ ಪ್ರಾಂತ್ಯದಲ್ಲಿ ತಾಲಿಬಾನಿಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ನಾರ್ದರ್ನ್ ಅಲಯನ್ಸ್ ಪಡೆಗಳನ್ನು ಶತಾಯಗತಾಯ ಮಣಿಸಲೇಬೇಕು ಎಂದು ಪಣ ತೊಟ್ಟಂತಿರುವ ತಾಲಿಬಾನಿಗಳು ಅಂದ್ರಾಬ್ ಕಣಿವೆಯಲ್ಲಿ ಆಹಾರ, ಅಗತ್ಯ ವಸ್ತುಗಳ ಸರಬರಾಜು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಅಫ್ಘಾನಿಸ್ತಾನದ "ಹಂಗಾಮಿ" ಅಧ್ಯಕ್ಷ ಅಮರುಲ್ಲಾ ಸಾಲೇಹ್ ಮಾಹಿತಿ ನೀಡಿದ್ದು, ಉತ್ತರ ಬಾಗ್ಲಾನ್ ಪ್ರಾಂತ್ಯದ ಅಂದ್ರಾಬ್ ಕಣಿವೆಗೆ ಸರಬರಾಜಾಗಬೇಕಿದ್ದ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಾಲಿಬಾನಿಗಳು ಸ್ಥಗಿತಗೊಳಿಸಿದ್ದಾರೆ. ಆ ಮೂಲಕ ತಾಲಿಬಾನ್ ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಅಂದ್ರಾಬಿ ಪ್ರದೇಶದಲ್ಲಿ ತಾಲಿಬಾನ್ ಮತ್ತು ಪ್ರತಿರೋಧ ಪಡೆಗಳ ನಡುವೆ ಘರ್ಷಣೆಗಳು ವರದಿಯಾಗಿರುವುದರಿಂದ ಆಹಾರ ಮತ್ತು ಅಗತ್ಯ ವಸ್ತುಗಳ ಸರಬರಾಜ ನಿಲ್ಲಿಸಲಾಗಿದೆ. ತಾಲಿಬ್‌ಗಳು ಆಹಾರ ಮತ್ತು ಇಂಧನವನ್ನು ಅಂದರಾಬ್ ಕಣಿವೆಯಲ್ಲಿ ಪ್ರವೇಶಿಸಲು ಅನುಮತಿಸುತ್ತಿಲ್ಲ. ಇಲ್ಲಿನ ಮಾನವೀಯ ಪರಿಸ್ಥಿತಿ ಭೀಕರವಾಗಿದೆ. ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಪರ್ವತಗಳಿಗೆ ಓಡಿಹೋಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ತಾಲಿಬರು ಮಕ್ಕಳು ಮತ್ತು ಹಿರಿಯರನ್ನು ಅಪಹರಿಸಿ ಅವರನ್ನು ಗುರಾಣಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮನೆಗಳನ್ನು ಹುಡುಕಿ ನಾಶ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಾಲಿಬ್‌ಗಳು ಪಕ್ಕದ ಅಂದರಾಬ್ ಕಣಿವೆಯ ಹೊಂಚುದಾಳಿಯಲ್ಲಿ ಸಿಕ್ಕಿಬಿದ್ದಿದ್ದು ಒಂದು ದಿನದ ನಂತರ ಪಂಜಶೀರ್ ಪ್ರವೇಶದ್ವಾರದ ಬಳಿ ಪಡೆಗಳನ್ನು ಒಟ್ಟುಗೂಡಿಸಿದ್ದಾರೆ. ಅವರ ಯೋಜನೆ ನಿರೀಕ್ಷಿತ ರೀತಿಯಲ್ಲಿ ಫಲ ನೀಡಿಲ್ಲ. ಹೀಗಾಗಿ ವಾಮಮಾರ್ಗದಲ್ಲಿ ಅವರು ಹೆದ್ದಾರಿಯಲ್ಲಿ ಸಾಗುತ್ತಿದ್ದ ಅಗತ್ಯವಸ್ತುಗಳ ಸರಬರಾಜು ತಪ್ಪಿಸಿದ್ದಾರೆ ಎಂದು ಸಾಲೇಹ್ ಟ್ವೀಟ್ ಮಾಡಿದ್ದಾರೆ.
ಇನ್ನು ಇದಕ್ಕೆ ಪ್ರತಿಕಾರವಾಗಿ ಸಲಾಂಗ್ ಹೆದ್ದಾರಿಯನ್ನು ಪ್ರತಿರೋಧದ ಪಡೆಗಳು ಮುಚ್ಚಿವೆ ಎಂದು ತಿಳಿದುಬಂದಿದೆ. ಖ್ಯಾತ ತಾಲಿಬಾನ್ ವಿರೋಧಿ ವ್ಯಕ್ತಿ ಅಹ್ಮದ್ ಶಾ ಮಸೂದ್ ಅವರ ಪುತ್ರ ಅಹ್ಮದ್ ಮಸೂದ್ ನೇತೃತ್ವದ ಪಂಜ್ ಶೀರ್ ಕಣಿವೆಯಲ್ಲಿ ಸ್ಥಳೀಯ ಪ್ರತಿರೋಧ ಪಡೆಗಳಿಂದ ತಾಲಿಬಾನ್ ಪಡೆಗಳ ಸವಾಲನ್ನು ಎದುರಿಸುತ್ತಿವೆ.
ಮಾನವಹಕ್ಕು ಆಯೋಗ ಮಧ್ಯಪ್ರವೇಶ
ಏತನ್ಮಧ್ಯೆ, ವಿಶ್ವಸಂಸ್ಥೆ ಮಾನವೀಯ ಏಜೆನ್ಸಿಗಳು ಆಫ್ಘಾನಿಸ್ತಾನ ಬಿಕ್ಕಟ್ಟಿನಲ್ಲಿ ಮಧ್ಯ ಪ್ರವೇಶ ಮಾಡಿದ್ದು, ಅಫ್ಘಾನಿಸ್ತಾನಕ್ಕೆ ತುರ್ತಾಗಿ ಅಗತ್ಯವಿರುವ ತುರ್ತು ಪೂರೈಕೆಗಳನ್ನು ತರಲು ಸಾಧ್ಯವಾಗುತ್ತಿಲ್ಲ ಎಂದು ಎಚ್ಚರಿಕೆ ನೀಡುತ್ತಿವ. ಅಂತೆಯೇ, "ಮಾನವೀಯ ಏರ್‌ಬ್ರಿಡ್ಜ್" ಅನ್ನು ತಕ್ಷಣವೇ ಸ್ಥಾಪಿಸಲು ವಿಶ್ವ ಸಮುದಾಯಕ್ಕೆ ಕರೆ ನೀಡುತ್ತಿದ್ದು, ಔಷಧಗಳು ಮತ್ತು ಇತರ ಸಹಾಯ ಸಾಮಗ್ರಿಗಳನ್ನು ದೇಶಕ್ಕೆ ಅಡೆತಡೆಯಿಲ್ಲದೆ ತಲುಪಿಸಲು ಈ ಏರ್ ಬ್ರಿಡ್ಜ್ ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಡಬ್ಲ್ಯುಎಚ್‌ಒ ಪ್ರಾದೇಶಿಕ ನಿರ್ದೇಶಕ ರಿಚರ್ಡ್ ಬ್ರಾನ್ಸನ್, ಈ ವಾರ ದೇಶಕ್ಕೆ ತಲುಪಿಸಲು ನಿಗದಿಪಡಿಸಿದ ಸುಮಾರು 500 ಟನ್‌ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಏಜೆನ್ಸಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿದೇಶಿಯರು ಮತ್ತು ದುರ್ಬಲ ಆಫ್ಘನ್ನರನ್ನು ಸ್ಥಳಾಂತರಿಸುವುದು ಮುಖ್ಯ ಗಮನವಾಗಿದೆ. ಆದರೆ ಏಜೆನ್ಸಿಗಳು "ಬಹುಸಂಖ್ಯಾತ ಜನಸಂಖ್ಯೆಯು ಎದುರಿಸುತ್ತಿರುವ ಬೃಹತ್ ಮಾನವೀಯ ಅಗತ್ಯಗಳು - ಮತ್ತು ನಿರ್ಲಕ್ಷಿಸಬಾರದು" ಎಂದು ಸೂಚಿಸಿದರು.