ಮಂಜೇಶ್ವರ: ಕೋವಿಡ್ ನಿಯಂತ್ರಣಕ್ಕೆ ಗಡಿ ಮುಚ್ಚಿ ತಪಾಸಣೆಗಿಳಿದಿರುವ ಕರ್ನಾಟಕ ಸರಕಾರ ಅವೈಜ್ಞಾನಿಕ ನಿಲುವು ತೆಗೆದುಕೊಂಡಿದೆ, ಕೇಂದ್ರ ಸರಕಾರದ ಅನ್ ಲಾಕ್ ಮಾರ್ಗಸೂಚಿಯನ್ನು ಉಲ್ಲಂಘಿಸಿ, ಗಡಿ ನಿಯಂತ್ರಣ ಹೇರಿರುವ ಬೊಮ್ಮಾಯಿ ಸರಕಾರ ಗಡಿನಾಡಿನ ಜನತೆಯೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದೆ ಎಂದು ಕಾಸರಗೋಡು ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದ್ದಾರೆ.
ಎರಡು ಡೋಸ್ ಲಸಿಕೆ ತೆಗೆದುಕೊಂಡವರಿಗೆ ಜಗತ್ತಿನೆಲ್ಲೆಡೆ ಪ್ರಯಾಣಿಸಬಹುದು, ಎರಡು ಡೋಸ್ ವ್ಯಾಕ್ಸಿನ್ ಪಡೆದ ನರೇಂದ್ರ ಮೋದಿಯವರ ಭಾವಚಿತ್ರವಿರುವ ಸರ್ಟಿಫಿಕೇಟ್ ಹೊಂದಿದ ಗಡಿಪ್ರದೇಶದವರಿಗೆ ಕರ್ನಾಟಕ ರಾಜ್ಯ ಪ್ರವೇಶಿಸಲು ಅನುಮತಿ ಇಲ್ಲ, ಈ ಹಿನ್ನೆಲೆಯಲ್ಲಿ ಅದಕ್ಕೆ ಬಿಜೆಪಿ ಆಡಳಿತದಲ್ಲಿಯೇ ಕವಡೆ ಕಾಸಿನ ಬೆಲೆಯೂ ಇಲ್ಲದಂತಾಗಿದೆಯೆಂದು ಹರ್ಷಾದ್ ವರ್ಕಾಡಿ ಹೇಳಿದ್ದಾರೆ.
ಕಾಸರಗೋಡು - ಮಂಗಳೂರು ನಡುವೆ ಬಸ್ಸು ಸಂಚಾರ ಸ್ಥಗಿತಗೊಳಿಸಿ, ಗಡಿ ನಿಯಂತ್ರಣ ಹೇರಿರುವ ಕುರಿತು ಹೇಳಿಕೆ ನೀಡಿರುವ ಸಂಸದ ನಳಿನ್ ಕುಮಾರ್ ಗಡಿನಾಡ ಜನತೆಗೆ ಅನ್ಯಾಯವೆಸಗಿದ್ದಾರೆ, ಕೋವಿಡ್ ರೋಗದ ಹೆಸರಿನಲ್ಲಿ ಪದೇ ಪದೇ ಗಡಿ ಮುಚ್ಚುವ ಕರ್ನಾಟಕದ ಬಿಜೆಪಿ ಸರಕಾರ ದೇಶದಲ್ಲಿ ಎಲ್ಲಿಯೂ ಇಲ್ಲದ ಕಾನೂನನ್ನು ಜ್ಯಾರಿಗೆ ತಂದಿದೆ, ತಮ್ಮಕೊಳಕು ರಾಜಕೀಯಕ್ಕೆ ಕೋವಿಡ್ ರೋಗವನ್ನು ಬಳಸುತ್ತಿರುವ ಬಿಜೆಪಿ ವರ್ತನೆ ಅಮಾನವೀಯ ಹಾಗೂ ನಾಚಿಗೇಡು ಎಂದು ಅವರು ಹೇಳಿದ್ದಾರೆ.