ಮುಂಬೈ, ಆಗಸ್ಟ್ 8: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಗೆ ಡೆಲ್ಟಾ ರೂಪಾಂತರ ತಳಿಯೇ ಪ್ರಮುಖ ಕಾರಣ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ದೇಶದಲ್ಲಿ ಮೂರನೇ ಅಲೆಗೆ ಅದರ ಮುಂದುವರಿದ ಭಾಗವಾಗಿರುವ ಡೆಲ್ಟಾ ಪ್ಲಸ್ ಕಾರಣ ಎಂಬುದನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಈಗಾಗಲೇ ಹೇಳಿದ್ದಾರೆ. ಇಂಥದರ ಮಧ್ಯೆ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಹೊಸ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.
"ಮಹಾರಾಷ್ಟ್ರದಲ್ಲಿ ಆಗಸ್ಟ್ 8ರ ಅಂಕಿ-ಅಂಶಗಳ ಪ್ರಕಾರ, ಒಟ್ಟು 45 ಮಂದಿಗೆ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಶೇ.80ರಷ್ಟು ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಸಂದರ್ಭದಲ್ಲಿ ಡೆಲ್ಟಾ ಪ್ಲಸ್ ತಳಿಯು ಪತ್ತೆಯಾಗಿದೆ," ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ 13 ಡೆಲ್ಟಾ ಪ್ಲಸ್ ಸೋಂಕಿತ ಪ್ರಕರಣಗಳು ವರದಿ ಮಾಡಿರುವ ಜಲಗೋನ್ ಜಿಲ್ಲೆಯು ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ಮೊದಲ ಜಿಲ್ಲೆಯಾಗಿದೆ. ಎರಡನೇ ಸ್ಥಾನದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿ 11, ಮುಂಬೈನಲ್ಲಿ 6, ಥಾಣೆ 5 ಮತ್ತು ಪುಣೆಯಲ್ಲಿ 3 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿ ಮಾಡಿವೆ.
ಕೊವಿಡ್-19 ಶಿಷ್ಟಾಚಾರ ಪಾಲಿಸುವಂತೆ ಮನವಿ:
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಹಾವಳಿ ಇಂದಿಗೂ ಕಡಿಮೆಯಾಗಿಲ್ಲ. ಮೊದಲ ಅಲೆ ಮತ್ತು ಎರಡನೇ ಅಲೆಯು ಕೊಂಚ ಇಳಿಮುಖವಾಗಿದೆ ನಿಜ, ಆದರೆ ಹಬ್ಬಗಳ ಆಚರಣೆ ವೇಳೆಯಲ್ಲಿ ಜನರು ಮೈಮರೆಯುವಂತಿಲ್ಲ. ಸಾರ್ವಜನಿಕರೆಲ್ಲ ಕಡ್ಡಾಯವಾಗಿ ಕೊವಿಡ್-19 ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ಕೊರೊನಾವೈರಸ್ ರೋಗಾಣುಗಳು ರೂಪಾಂತರಗೊಳ್ಳುತ್ತಿವೆ. ಡೆಲ್ಟಾ ವೈರಸ್ ಶರವೇಗದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಮುಂಬೈನಲ್ಲಿ ರೋಗಾಣುವಿನ ಡಿಎನ್‌ಎ ಪರೀಕ್ಷೆ ನಡೆಸುವಂತಾ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಠಾಕ್ರೆ ತಿಳಿಸಿದ್ದಾರೆ.
ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಮತ್ತು ಮೂರನೇ ಅಲೆಯ ಭೀತಿ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪುಣೆ, ಅಹ್ಮದನಗರ್, ಸೋಲಾಪುರ್, ಸಾಂಗ್ಲಿ, ಸತಾರಾ, ಸಿಂಧುದರ್ಗ್ ಮತ್ತು ರತ್ನಗಿರಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳಲ್ಲೇ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ತಿಳಿದು ಬಂದಿದೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಕೊರೊನಾವೈರಸ್:
ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ 5508 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಮಹಾಮಾರಿಗೆ 151 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 13,39,96ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯು 63,53,328ಕ್ಕೆ ಏರಿಕೆಯಾಗಿದೆ. ಇದುವರೆಗೂ 4895 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 61,44,388ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 71,510 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ. ಇದರ ಹೊರತಾಗಿ 4,22,996 ಸೋಂಕಿತರು ಗೃಹ ದಿಗ್ಬಂಧನದಲ್ಲಿದ್ದರೆ, 2,749 ಮಂದಿ ಸಾಂಸ್ಥಿಕ ದಿಗ್ಬಂಧನದಲ್ಲಿದ್ದಾರೆ.
ದೇಶದ ಆರ್ಥಿಕತೆ ಮೇಲೆ ಮೂರನೇ ಅಲೆ ಪ್ರಭಾವ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಈ ಮೊದಲಿನಂತೆ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಇದರ ಮಧ್ಯೆ ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ ಸಲಹೆಗಾರ ರಾಮ್ ವಿಶ್ವಕರ್ಮ ಪ್ರಕಾರ, "ನಗರ ಹಾಗೂ ನೆರೆಹೊರೆ ಪ್ರದೇಶಗಳಿಗೆ ವೈರಸ್ ಹರಡಲು ಮೂಲ ಕಾರಣವಾಗಿರುವ ಗಾಳಿ ಮತ್ತು ಕೊಳಚೆ ನೀರಿನ ಮೇಲೆ ಹೆಚ್ಚು ನಿಗಾ ವಹಿಸಬೇಕಿದೆ. ಮುಂದಿನ ಅಲೆಯ ವೇಳೆಗೆ ಜೀವ ಮತ್ತು ಜೀವನವನ್ನು ರಕ್ಷಿಸಿಕೊಳ್ಳುವುದಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದರ ಜೊತೆಗೆ ಈ ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಗೊಳ್ಳಬೇಕು," ಎಂದು ಸಲಹೆ ನೀಡಿದ್ದಾರೆ.