ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭದ್ರತೆ ಕುರಿತ ಸಂಪುಟ ಸಮಿತಿಯ ಸಭೆ ನಡೆಸಿದರು.
ಭದ್ರತೆಯ ಕುರಿತ ಸಂಪುಟ ಸಮಿತಿಯು ರಾಷ್ಟ್ರೀಯ ಭದ್ರತೆಯ ಸಮಸ್ಯೆಗಳನ್ನು ಎದುರಿಸುವ ಅತ್ಯುನ್ನತ ಸರ್ಕಾರಿ ಸಮಿತಿಯಾಗಿದೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಹಿರಿಯ ಅಧಿಕಾರಿಗಳು ಅವರು ಭಾಗವಹಿಸಿದ್ದರು ಎಂದು
ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಸಭೆಯಲ್ಲಿ ಏನು ನಡೆಯಿತು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹಾಗೂ ಇಂದು ಭಾರತಕ್ಕೆ ಮರಳಿದ ಅಫ್ಘಾನಿಸ್ತಾನದ ಭಾರತದ ರಾಯಭಾರಿ ರುದ್ರೇಂದ್ರ ಟಂಡನ್ ಸಹ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಅಫ್ಘಾನ್ ರಾಜಧಾನಿಯಲ್ಲಿ ಉದ್ವಿಗ್ನತೆ ಮತ್ತು ಹದಗೆಟ್ಟಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಭಾರತ ತೆರವುಗೊಳಿಸಿದ್ದು, ತನ್ನ ರಾಯಭಾರಿ ಮತ್ತು ಎಲ್ಲಾ ಸಿಬ್ಬಂದಿಯನ್ನು ವಾಪಸ್ ಕರೆತಂದಿದೆ.