ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಮಂಗಳವಾರ ಬಂಧಿಸಲಾಗಿದೆ.
ರತ್ನಗಿರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಬಿಜೆಪಿಯ ಜನಾಶೀರ್ವಾದ ಸಮಾರಂಭದಲ್ಲಿ ಭೋಜನ ಸೇವಿಸುತ್ತಿದ್ದಾಗಲೇ ರಾಣೆ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಇದು ರಾಜಕೀಯ ವಿವಾದವಾಗಿ ಮಾರ್ಪಟ್ಟಿದ್ದು, ಪ್ರತಿಭಟನೆಗೆ ಕಾರಣವಾಯಿತು. ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ ಅವರೂ ಈ ಬೆಳವಣಿಗೆಯನ್ನು ಖಂಡಿಸಿದ್ದಾರೆ.
'ಮುಖ್ಯಮಂತ್ರಿಯವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷ ತಿಳಿಯದಿರುವುದು ಅವಮಾನಕರ ವಿಷಯ, ನಾನು ಸ್ಥಳದಲ್ಲೇನಾದರೂ ಇದ್ದಿದ್ದರೆ ಅವರ ಕಪಾಳಕ್ಕೆ ಬಾರಿಸುತ್ತಿದ್ದೆ' ಎಂದು ನಾರಾಯಣ ರಾಣೆ ಹೇಳಿದ್ದರು.
ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಧ್ವಜಾರೋಹಣ ನಡೆಸಿ ಭಾಷಣ ಮಾಡುತ್ತಿದ್ದ ವೇಳೆ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ ತಿಳಿದುಕೊಂಡು ಹೇಳಿದ್ದರು.
ನಾರಾಯಣ ರಾಣೆ ವಿರುದ್ಧ ನಾಸಿಕ್ ನಗರ ಶಿವಸೇನೆ ಘಟಕದ ಮುಖ್ಯಸ್ಥ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನ), 153-ಬಿ (1) (ಸಿ) ಅಡಿಯಲ್ಲಿ ರಾಣೆ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ರಾಣೆ ತಮ್ಮ ವಿರುದ್ಧದ ಎಫ್‌ಐಆರ್ ರದ್ದಗೊಳಿಸುವಂತೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ, ಕೋರ್ಟ್‌ನ ಕಾರ್ಯಕಲಾಪ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅರ್ಜಿಯನ್ನು ಇಂದು ಸಲ್ಲಿಸಲು ಆಗಿಲ್ಲ. ನಾಳೆ ಅರ್ಜಿ ಸಲ್ಲಿಸುವುದಾಗಿ ರಾಣೆ ಪರ ವಕೀಲರು ಮಾಹಿತಿ ನೀಡಿದ್ದಾರೆ.
ರಾಣೆ ಹೇಳಿಕೆ ಬೆಂಬಲಿಸಲಾರೆ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ
ಸಿಎಂ ಉದ್ಧವ ಠಾಕ್ರೆ ಅವರ ವಿರುದ್ಧದ ಸಚಿವ ನಾರಾಯಣ ರಾಣೆ ಅವರ ಹೇಳಿಕೆಯನ್ನು ನಾನು ಬೆಂಬಲಿಸಲಾರೆ. ಆದರೆ, ಅದೇ ಕಾರಣಕ್ಕೆ ಬಂಧಿಸುವುದು, ಬಂಧನ ವಾರೆಂಟ್ ಜಾರಿ ಮಾಡಿರುವುದೇ ಆಗಿದ್ದರೆ, ರಾಜ್ಯಪಾಲರ ವಿರುದ್ಧದ ಹೇಳಿಕೆಗಳ ಬಗ್ಗೆ ಏನು ಹೇಳಬೇಕು? ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾದ ಅವರ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳು ನಿತ್ಯವೂ ಹೇಳಿಕೆಗಳನ್ನು ನೀಡುತ್ತಾರೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.