ಬದಿಯಡ್ಕ :'ಶಾಲೆಯಲ್ಲಿ ಪಠ್ಯ ಚಟುವಟಿಕೆಗೆ ನೀಡುವಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗೂ ನೀಡಬೇಕು. ಶಿಕ್ಷಕರು ಹಾಗೂ ಪೋಷಕರು ತಮ್ಮ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು' ಎಂದು ಬೆಂಗಳೂರಿನ ಡಾ. ಕೆ ಎನ್ ಅಡಿಗ ಅಡೂರು ಹೇಳಿದರು.
ಅವರು ಈಚೆಗೆ ಆನ್‍ಲೈನ್ ಮೂಲಕ ಬದಿಯಡ್ಕ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
' ಮಕ್ಕಳು ಕೇವಲ ಅಂಕ ಗಳಿಕೆಗೆ ಸೀಮಿತವಾಗಬಾರದು. ಅವರ ಸುಪ್ತ ಪ್ರತಿಭೆಯನ್ನು ಬೆಳೆಸಲು ವಿದ್ಯಾರಂಗ ಸಾಹಿತ್ಯ ವೇದಿಕೆ ಸದಾ ಸಹಕರಿಸುತ್ತದೆ. ಅದನ್ನು ಬಳಸಿಕೊಳ್ಳಬೇಕು' ಎಂದು ಹೇಳಿದರು. ಪ್ರದ್ಯುಮ್ನ ಶರ್ಮ ಉಪ್ಪಂಗಳ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ತಂಗಮಣಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳಾದ ನಿಶ್ಮಿತಾ, ಜಿಶಾನ್,ಯತಿಕಾ,ವಿಶ್ವಾಸ್, ಚಿತ್ತರಂಜನ್ ಮೊದಲಾದವರು ಸಾಹಿತ್ಯ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಶಿಕ್ಷಕಿ ಸುಶೀಲಾ ಪದ್ಯಾಣ ಸ್ವಾಗತಿಸಿದರು. ಸರ್ವಮಂಗಳ ಟೀಚರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.