ನ್ಯೂಯಾರ್ಕ್: ವರ್ಕ್ ಫ್ರಂ ಹೋಂ ಮಾಡುವ ಉದ್ಯೋಗಿಗಳ ವೇತನ ಕಡಿತಕ್ಕೆ ಗೂಗಲ್ ಚಿಂತನೆ ನಡೆಸಿದೆ. ಕೊರೊನಾ ಸೋಂಕಿನಿಂದಾಗಿ ಹಲವು ಕ್ಷೇತ್ರಗಳಲ್ಲಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿತ್ತು.
ಗೂಗಲ್‌ನಲ್ಲಿ ಡಿಸೆಂಬರ್ ವರೆಗೆ ವರ್ಕ್ ಫ್ರಂ ಹೋಂ ವಿಸ್ತರಣೆ ಮಾಡಲಾಗಿತ್ತು. ಗೂಗಲ್, ಫೇಸ್ ಬುಕ್, ಟ್ವಿಟರ್ ನಂತಹ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಕಳೆದ 1 ವರ್ಷದಿಂದ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿವೆ.
ಇನ್ನಿತರ ಟೆಕ್ ಸಂಬಂಧಿತ ಕಂಪನಿಗಳು ತಮ್ಮ ನೌಕರರರಿಗೆ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಪರಿಗಣಿಸುವುದಕ್ಕೂ ಅವಕಾಶ ನೀಡಿವೆ.
ರಾಯ್ಟರ್ಸ್ ವರದಿಯ ಪ್ರಕಾರ ದೂರದ ಪ್ರದೇಶಗಳಲ್ಲಿದ್ದುಕೊಂಡು ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ವೇತನ ಕತ್ತರಿ ಬಿಸಿ ತಟ್ಟಲಿದೆ.
ಫೇಸ್ ಬುಕ್, ಟ್ವಿಟರ್ ಈಗಾಗಲೇ ಇಂತಹ ನಿಯಮವನ್ನು ಜಾರಿಗೊಳಿಸಿದ್ದು ಕಡಿಮೆ ವೆಚ್ಚವಿರುವ ಪ್ರದೇಶಗಳಿಂದ ಕಾರ್ಯನಿರ್ವಹಿಸುತ್ತಿರುವವರಿಗೆ ವೇತನ ಕಡಿತಗೊಳಿಸುತ್ತಿದೆ.
ಒಂದು ವೇಳೆ ಗೂಗಲ್ ಈ ನಿಯಮ ಜಾರಿಗೊಳಿಸಿದ್ದೇ ಆದಲ್ಲಿ ಶೇ.25 ರಷ್ಟು ವೇತನ ಕಡಿತಗೊಳ್ಳುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿಯೇ ಈ ಬಗ್ಗೆ ಆಂತರಿಕವಾಗಿ ಚರ್ಚಿಸಿದ್ದ ಗೂಗಲ್, ತನ್ನ ನೌಕರರು ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡುವ ಆಯ್ಕೆಯನ್ನು ಒಪ್ಪಿಕೊಂಡಲ್ಲಿ ಕಡಿತಗೊಳ್ಳುವ ವೇತನದ ಬಗ್ಗೆ ಇದ್ದ ಲೆಕ್ಕಾಚಾರಗಳನ್ನೂ ಹಂಚಿಕೊಂಡಿತ್ತು.
ಈ ಬೆನ್ನಲ್ಲೇ ಸರ್ಚ್ ಇಂಜಿನ್ ದೈತ್ಯ ಸಂಸ್ಥೆ ಗೂಗಲ್ ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಲು ಬಯಸುವ ತನ್ನ ಉದ್ಯೋಗಿಗಳಿಗೆ ಮಾಸಿಕ ವೇತನ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ.
ನಮ್ಮ ಪ್ಯಾಕೇಜ್ ಗಳು ಪ್ರದೇಶಗಳ ಆಧಾರದಲ್ಲಿರುತ್ತವೆ. ಉದ್ಯೋಗಿ ಎಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಆಧರಿಸಿ ಸ್ಥಳೀಯ ಮಾರುಕಟ್ಟೆ ಆಧಾರದಲ್ಲಿ ಹೆಚ್ಚಿನ ವೇತನ ನೀಡಲಾಗುತ್ತದೆ ಎಂದು ಗೂಗಲ್ ವಕ್ತಾರರು ಹೇಳಿದ್ದಾರೆ.
ಗೂಗಲ್ ಕಚೇರಿಗಳು ಇರುವ ಪ್ರದೇಶಗಳಲ್ಲಿಯೇ ಶಾಶ್ವತವಾಗಿ ಮನೆಯಿಂದ ಕೆಲಸ ಮಾಡಲು ಬಯಸುವ ನೌಕರರಿಗೆ ಈ ವೇತನ ಕಡಿತ ಯೋಜನೆ ಅನ್ವಯವಾಗುವುದಿಲ್ಲ.
ನ್ಯೂಯಾರ್ಕ್ ನಗರದಿಂದ ರೈಲಿನಲ್ಲಿ ಪ್ರಯಾಣಿಸಲು ಒಂದು ಗಂಟೆ ಸಮಯ ತೆಗೆದುಕೊಳ್ಳುವ ನಗರಗಳಾದ ಸ್ಟಾಮ್‌ಫೋರ್ಡ್, ಕನೆಕ್ಟಿಕಟ್ ಗಳಿಂದ ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆ ಬಯಸುವ ಉದ್ಯೋಗಿಗೆ ಶೇ.15 ರಷ್ಟು ಕಡಿಮೆ ವೇತನ ದೊರೆತರೆ, ನ್ಯೂಯಾರ್ಕ್ ನಲ್ಲೇ ಇದ್ದುಕೊಂಡು ಶಾಶ್ವತವಾಗಿ ಮನೆಯಿಂದ ಕೆಲಸ ಮಾಡುವ ಆಯ್ಕೆ ಬಯಸುವ ಆತನ ಸಹೋದ್ಯೋಗಿಗೆ ಯಾವುದೇ ವೇತನ ಕಡಿತ ಇರುವುದಿಲ್ಲ.
ಗೂಗಲ್ ಕಂಪನಿಯು ತನ್ನ ಸಿಬ್ಬಂದಿಗೆ 2021ರ ಡಿಸೆಂಬರ್‌ವರೆಗೂ ವರ್ಕ್ ಫ್ರಂ ಹೋಂ ವಿಸ್ತರಿಸಿದೆ. ಈ ವರ್ಷದ ಜುಲೈನಲ್ಲಿ ವರ್ಕ್ ಫ್ರಂ ಹೋಂ ಅನ್ನು 2021ರ ಜೂನ್ ವರೆಗೆ ವಿಸ್ತರಿಸಿದ್ದ ಮೊದಲ ಕಂಪೆನಿ ಗೂಗಲ್ ಆಗಿತ್ತು. ಯಾವ ಕೆಲಸಗಳಿಗೆ ಖುದ್ದಾಗಿ ಕಚೇರಿಗೆ ಬರುವ ಅಗತ್ಯ ಇಲ್ಲವೋ ಅಂಥವರು ವರ್ಕ್ ಫ್ರಂ ಹೋಂ ಮುಂದುವರಿಸಬಹುದು ಎಂದು ತಿಳಿಸಿತ್ತು.
ವಿಶ್ವಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯವಿಶ್ವಾದ್ಯಂತ ಜಿಮೇಲ್, ಯೂಟ್ಯೂಬ್ ಸೇರಿದಂತೆ ಗೂಗಲ್ ಸೇವೆಯಲ್ಲಿ ವ್ಯತ್ಯಯ
ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ಕಂಪೆನಿ ಸಿಬ್ಬಂದಿಗೆ ಇ ಮೇಲ್ ಕಳುಹಿಸಿದ್ದು, ಕಂಪೆನಿಯ ಅಂಗ ಸಂಸ್ಥೆಯಾದ ಗೂಗಲ್ ನಿಂದ ಕೊರೊನಾ ಸೋಂಕಿನಿಂದಾಗಿ ಮುಂದಿನ ಸೆಪ್ಟೆಂಬರ್ ವರೆಗೆ ವರ್ಕ್ ಫ್ರಂ ಹೋಂ ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದರು.
ಉದ್ಯೋಗಿಗಳು ಕಚೇರಿಗೆ ಹಿಂದಿರುಗಿದ ಬಳಿಕ ಅವರ ಅನುಕೂಲ ನೋಡಿಕೊಂಡು, ವಾರದಲ್ಲಿ ಮೂರು ದಿನ ಕಚೇರಿಗೆ ಬರುವುದು ಉಳಿದ ದಿನ ಮನೆಯಲ್ಲಿ ಕೆಲಸ ಹೀಗೆ ಪ್ರಸ್ತಾವ ಮುಂದಿಡಲಾಗಿದೆ.
ಹೀಗೆ ಮಾಡುವುದರಿಂದ ಸಿಬ್ಬಂದಿ ಹಾಗೂ ಕಚೇರಿ ದೃಷ್ಟಿಯಿಂದ ಇಬ್ಬರಿಗೂ ಅನುಕೂಲವಿದೆ, ಶ್ರಮವೂ ಕಡಿಮೆಯಾಗಿ ಉತ್ಪಾದಕತೆಯೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತಿದೆ.