ನವದೆಹಲಿ: ಕೊರೊನಾ ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡು ಆತಂಕದಲ್ಲಿರುವ ಮಕ್ಕಳಿಗೆ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಕೈಗೊಂಡಿರುವ ಯೋಜನೆಗಳು ತೃಪ್ತಿದಾಯಕವಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಕೋವಿಡ್ -19 ಸಾಂಕ್ರಾಮಿಕ ಅನೇಕ ಜೀವಗಳನ್ನು ಧ್ವಂಸಗೊಳಿಸಿದೆ. ವಿಶೇಷವಾಗಿ ಎಳೆ ವಯಸ್ಸಿನ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿರುವುದು ತುಂಬಾ ನೋವುಂಟು ಮಾಡಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾಗಿರುವ ಅಥವಾ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡು ಆತಂಕದಲ್ಲಿರುವ ಮಕ್ಕಳನ್ನು ಗುರುತಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 'ತೃಪ್ತಿದಾಯಕ ಪ್ರಗತಿಯನ್ನು' ಸಾಧಿಸಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೊರೊನಾ ಸೋಂಕಿನಿಂದ ಅನಾಥರಾಗಿರುವ ಮಕ್ಕಳಿಗೆ ನೆರವು ನೀಡುವ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಘೋಷಿಸಿವೆ. ಅಂಥ ಮಕ್ಕಳಿಗೆ ತಕ್ಷಣ ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ವಿಳಂಬ ಮಾಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರರಾವ್ ಮತ್ತು ಅನಿರುದ್ಧ ಬೋಸ್ ಅವರನ್ನೊಳಗೊಂಡ ಪೀಠ ಹೇಳಿದೆ.
'ಮಕ್ಕಳ ರಕ್ಷಣಾ ಮನೆಗಳಲ್ಲಿ ಕೋವಿಡ್-19 ಸಾಂಕ್ರಾಮಿಕದ' ಕುರಿತ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸುವ ವೇಳೆ, ನ್ಯಾಯಪೀಠ, 'ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಸುಮಾರು ಒಂದು ಲಕ್ಷ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ' ಎಂಬುದನ್ನು ಗಮನಿಸಿತು.
ಇದೇ ವೇಳೆ, 'ಬಾಲ ನ್ಯಾಯ ಸಮಿತಿ (ಸಿಡಬ್ಲ್ಯೂಸಿ) ಯ ವಿಚಾರಣೆಗಳು, ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ, 2015 ರ ಅನುಸಾರವಾಗಿ, ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಗುರುತಿಸುವುದನ್ನು ತ್ವರಿತಗೊಳಿಸಬೇಕು' ಎಂದು ನ್ಯಾಯಪೀಠ ಹೇಳಿದೆ.
ಹಾಗೆಯೇ, 'ಅಪ್ರಾಪ್ತ ವಯಸ್ಕರಿಗೆ ಅಗತ್ಯವಿರುವ ಯೋಜನೆಗಳ ಪ್ರಯೋಜನಗಳು ತಲುಪುವಂತೆ ಮಾಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ಪೀಠ ಹೇಳಿದೆ.
ಸಂವಿಧಾನದ ಪ್ರಕಾರ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯವಾಗಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಹಕ್ಕಿದೆ. ಸುಲಭವಾಗಿ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ ಮತ್ತು ಬಾಧ್ಯತೆ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.