ಮಂಗಳೂರು: ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ಹಲಸಿನ ಹಣ್ಣಿಗೆ ಈಗ ಭಾರೀ ಬೇಡಿಕೆ ಇದೆ. ಹಣ್ಣಾಗಿ ಕೊಳೆತು ಮರದಿಂದ ಉದುರಿ ಹೋಗುವ ಕಾಲವಿತ್ತು. ಆದರೆ ಈಗ ಹಲಸು ಹಣ್ಣಾಗೋದನ್ನೇ ಕಾಯುವಂತೆ ಮಾಡಿದೆ. ಭಾರತದ ಹಲಸಿನ ಹಣ್ಣಿಗೆ ವಿದೇಶದಲ್ಲೂ ಸಖತ್ ಬೇಡಿಕೆಯಿದ್ದು, ಹಲಸಿನ ಹಣ್ಣು ರಫ್ತಾಗುತ್ತಿದೆ. ಹಣ್ಣಿಗೆ ಸಖತ್ ಬೇಡಿಕೆ ಬಂದಿದೆ.
ಇದೇ ಹಲಸಿನ ಹಣ್ಣನ್ನು ಈಗ ಬ್ರ್ಯಾಂಡ್ ಮಾಡಲು ಕ್ಯಾಂಪ್ಕೋ ನಿರ್ಧಾರ ಮಾಡಿದೆ. ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪೋ ಹಲಸಿನ ಹಣ್ಣು ಬಳಸಿ ಚಾಕಲೇಟ್ ಉತ್ಪಾದಿಸುವ ಹೊಸ ಪ್ರಯತ್ನಕ್ಕೆ ಕೈಹಾಕಿದೆ. 'ಜಾಕ್ ಪ್ರೂಟ್ ಎಕ್ಲರ್ಸ್' ಎಂಬ ಹೆಸರಿನಲ್ಲಿ ಈ ಚಾಕಲೇಟ್ ಮಾರುಕಟ್ಟೆಗೆ ಬಂದಿದ್ದು, ಹಣ್ಣಿನಿಂದ ತಯಾರಿಸಿದ ಚಾಕಲೇಟ್ ಉತ್ಪನ್ನ ಭಾರತದಲ್ಲಿ ಇದೇ ಮೊದಲ ಬಾರಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ.
ಪ್ರಕೃತಿದತ್ತವಾಗಿ ಸಿಗುವ ಫಲಗಳಲ್ಲಿ ಹಲಸಿನ ಹಣ್ಣು ಕೂಡಾ ಒಂದು. ಯಥೇಚ್ಛವಾಗಿ ಸಿಗುವ ಕಾರಣಕ್ಕಾಗಿ ಜನ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದ ಹಲಸಿನ ಹಣ್ಣಿಗೆ ಈಗ ಜಾಗತಿಕ ಮಟ್ಟದಲ್ಲಿ ಬೇಡಿಕೆ ಇದೆ. ಅದರಲ್ಲೂ ಯುರೋಪಿಯನ್ ದೇಶಗಳಲ್ಲಿ ಇದನ್ನು ಸೂಪರ್ ಫುಡ್ ಎನ್ನುವ ರೀತಿಯಲ್ಲಿ ಹಲಸಿನ ಹಣ್ಣನ್ನು ಪರಿಚಯಿಸಲಾಗುತ್ತಿದೆ. ಚಿಪ್ಸ್, ಸಿಹಿ ತಿನಿಸು ಸೇರಿದಂತೆ ಬಗೆಬಗೆಯ ಖಾದ್ಯಗಳಿಗೆ ಹೆಸರಾದ ಹಲಸಿನ ಹಣ್ಣಿನಿಂದ ಈಗ ಚಾಕಲೇಟ್ ಅಭಿವೃದ್ಧಿಪಡಿಸಲಾಗಿದೆ.
ಅಡಿಕೆ ಬೆಳೆಗಾರರ ಸಹಕಾರಿ ಸಂಸ್ಥೆಯಾದ ದಕ್ಷಿಣಕನ್ನಡ ಜಿಲ್ಲೆಯ ಕ್ಯಾಂಪ್ಕೋ ಈ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಈಗಾಗಲೇ ಜ್ಯಾಕ್ ಪ್ರೂಟ್ ಚಾಕಲೇಟ್‌ಗಳನ್ನು ಸ್ಥಳೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಚಾಕಲೇಟ್ ಕರ್ನಾಟಕ ಹಾಗೂ ಕೇರಳದ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ಕೆಲವೇ ದಿನಗಳಲ್ಲಿ ಇದು ದೇಶದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ವಿಭಿನ್ನವಾದ ರುಚಿ ಹೊಂದಿರುವ ಹಲಸಿನ ಹಣ್ಣಿನ ಚಾಕಲೇಟ್ ನ್ನು ತಯಾರಿಸುವ ಬಗೆ ಕೂಡಾ ಬಹಳ ವಿಶೇಷವಾಗಿದೆ. ಗ್ರಾಹಕರ ತೋಟದಿಂದ ನೇರವಾಗಿ ತಂಡ ಹಲಸಿನ ಹಣ್ಣಿನ್ನು ಸಂಸ್ಕರಿಸಿ ಅದರಿಂದ ನೀರಿನ ಅಂಶ ಮತ್ತು ಎಣ್ಣೆಯ ಅಂಶಗಳನ್ನು ತೆಗೆದ ಬಳಿಕ ಹಣ್ಣನ್ನು ಪುಡಿ ಮಾಡಿ ಚಾಕಲೇಟ್ ಮಾಡಲಾಗುತ್ತದೆ. ಒಂದು ಟನ್ ಚಾಕಲೇಟ್ ಉತ್ಪಾದನೆಗೆ 100 ಕೆ.ಜಿ ಡ್ರೈ ಮಾಡಲಾದ ಹಲಸಿನ ಹಣ್ಣಿನ ಚಿಪ್ಸ್ ಬೇಕಾಗುತ್ತದೆ. ಇದಕ್ಕೆ ಕೇರಳ ಹಾಗೂ ಕರ್ನಾಟಕದ ಸ್ವಾದಿಷ್ಟ ಹಲಸಿನ ಹಣ್ಣುಗಳನ್ನು ಬಳಕೆ ಮಾಡಲಾಗಿದೆ.
9 ತಿಂಗಳು ಸಂಗ್ರಹ ಚಾಕಲೇಟ್ ಅನ್ನು ಮಾರುಕಟ್ಟೆಗೆ ಜಾರ್‌ನಲ್ಲಿ ಬಿಡುಗಡೆ ಗೊಳಿಸಲಾಗುತ್ತಿದೆ. ಒಂದು ಜಾರ್‌ನಲ್ಲಿ 80 ಚಾಕಲೇಟ್ ಪೀಸ್ ಇದ್ದು, 1 ಪೀಸ್‌ಗೆ 2 ರೂಪಾಯಿ ದರ ಹಾಗೂ 1 ಜಾರ್‌ಗೆ 160 ರೂಪಾಯಿ ದರ ನಿಗದಿಪಡಿಸಲಾಗಿದೆ. ಶೇ.12ರಷ್ಟು ಹಲಸಿನ ಹಣ್ಣಿನ ಅಂಶ, ಸಕ್ಕರೆ, ಹಾಗೂ ಫ್ಯಾಟ್‌ನ್ನು ಬಳಸಿ ಚಾಕಲೇಟ್ ಸಿದ್ಧಪಡಿಸಲಾಗಿದೆ. ಗರಿಷ್ಠ 9 ತಿಂಗಳವರೆಗೆ ಈ ಚಾಕಲೇಟ್ ಸಂಗ್ರಹ ಮಾಡಿ ಉಪಯೋಗಿಸಬಹುದಾಗಿದೆ.
ಚಾಕಲೇಟ್‌ಅನ್ನು ಹೆಚ್ಚಾಗಿ ಮಕ್ಕಳೇ ಉಪಯೋಗಿಸುವ ಕಾರಣ, ಮಕ್ಕಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆಯೂ ಈ ಚಾಕಲೇಟನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾನ್ಯತೆ ನೀಡುವ ಆಕಾಂಕ್ಷೆಗೆ ಕ್ಯಾಂಪ್ಕೋ ಈ ಮೂಲಕ ಸಾಥ್ ನೀಡಿದೆ.
ಹಲಸಿನ ಕಾಯಿ ಚಿಪ್ಸ್, ಹಲಸಿನ ಕಾಯಿ ಹಪ್ಪಳ ಈಗಾಗಲೇ ಕರಾವಳಿ, ಮಲೆನಾಡು ಮಾತ್ರವಲ್ಲದೇ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಭಾರೀ ಬೇಡಿಕೆ ಇರುವ ಆಹಾರ ಉತ್ಪನ್ನವಾಗಿದೆ. ಈಗ ಕ್ಯಾಂಪ್ಕೋ ಅಭಿವೃದ್ಧಿಗೊಳಿಸಿರುವ ಚಾಕಲೇಟ್ ಹೇಗೆ ಬೇಡಿಕೆ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.
ಒಟ್ಟಿನಲ್ಲಿ ಅಡಿಕೆ ಹಾಗೂ ಕೊಕ್ಕೋ ಬೆಳೆಗಾರರಿಗೆ ಮಾತ್ರ ಸ್ಪಂದಿಸುತ್ತಿದ್ದ ಅಂತರರಾಜ್ಯ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ಇದೀಗ ಹಲಸಿನ ಹಣ್ಣಿನ ಮೌಲ್ಯವರ್ಧನೆಗೂ ಮುಂದಾಗಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಹಣ್ಣು ಬೆಳೆಯುವ ಕೃಷಿಕನಿಗೆ ವರದಾನವಾಗುವ ಸಾಧ್ಯತೆಯೂ ಇದೆ.