ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಮಾಡಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪಟ್ಟಾಪು ಆದರ್ಶ, ಲವನೂರು ಸಾಂಬಶಿವರೆಡ್ಡಿ, ಧಾಮಿ ರೆಡ್ಡಿ, ಪಾಮುಲ ಸುಧೀರ್ ಹಾಗೂ ಲಿಂಗಾರೆಡ್ಡಿ ಬಂಧಿತರು.
ಈ ಕೃತ್ಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಲೋಕಸಭಾ ಸದಸ್ಯ ನಂದಿಗಂ ಸುರೇಶ್ ಹಾಗೂ ಅಮಂಚಿ ಕೃಷ್ಣಮೋಹನ್ ಅವರ ಪಾತ್ರವಿರುವ ಶಂಕೆ ಇರುವ ಕಾರಣ, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಇವರ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
'ಈ ಕೃತ್ಯದ ಹಿಂದೆ ದೊಡ್ಡ ಪಿತೂರಿಯೇ ಇರುವ ಸಂದೇಹವಿದೆ. ಇನ್ನಷ್ಟು ತನಿಖೆಯಿಂದ ಪಿತೂರಿ ಏನೆಂಬುದು ಹೊರಬೀಳಲು ಸಾಧ್ಯ' ಎಂದು ಸಿಬಿಐ ವಕ್ತಾರ ಆರ್.ಸಿ.ಜೋಶಿ ತಿಳಿಸಿದ್ದಾರೆ.