ಪುಣೆ: ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತಿ ಸಾಧಿಸಿದಲ್ಲಿ ಭಾರತವು ಸೂಪರ್ ಪವರ್ ಅಗಿ ಹೊರಹೊಮ್ಮಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದರು.
ಇಲ್ಲಿನ ರಕ್ಷಣಾ ಆಧುನಿಕ ತಂತ್ರಜ್ಞಾನ ಸಂಸ್ಥೆ (ಡಿಐಎಟಿ)ಯಲ್ಲಿ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸಂಶೋಧನೆ ಮತ್ತು ಅನ್ವೇಷಣೆಯಲ್ಲಿ ದೇಶವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿದ್ದಾರೆ' ಎಂದು ತಿಳಿಸಿದರು.
ಸೇನಾ ಪಡೆಗಳ ನಡುವೆ ಮಾಹಿತಿ, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳುವ ಮೂಲಕ ಕೆಲ ನೂತನ ಸಂಶೋಧನೆ, ಅನ್ವೇಷಣೆಗೆ ಸಚಿವಾಲಯವು ಈಗಾಗಲೇ ಚಾಲನೆ ನೀಡಿದೆ ಎಂದೂ ಅವರು ತಿಳಿಸಿದರು.
'ರಕ್ಷಣಾ ಸಚಿವಾಲಯ ಐಡೆಕ್ಸ್ ಹೆಸರಿನ ವೇದಿಕೆಯನ್ನು ರೂಪಿಸಿದ್ದು, ರಕ್ಷಣಾ ಕ್ಷೇತ್ರದಲ್ಲಿ ಹೊಸ ಅನ್ವೇಷಣೆಗೆ ಹೊಸ ಪ್ರತಿಭೆಗಳನ್ನು ಆಹ್ವಾನಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 1,000 ಕೋಟಿ ಹಂಚಿಕೆ ಮಾಡಿದೆ. ಅಲ್ಲದೆ, ವೈಮಾಂತರಿಕ್ಷ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡಲು ₹ 500 ಕೋಟಿಯನ್ನು ಹಂಚಿಕೆ ಮಾಡಿದೆ' ಎಂದು ಹೇಳಿದರು.