ಟೋಕಿಯೊ: ಓಟದ ಸ್ಪರ್ಧೆ ವೇಳೆ ನೆಲಕ್ಕೆ ಬಿದ್ದ ನೆದರ್ಲೆಂಡ್ ನ ಓಟಗಾರ್ತಿ ಸಿಫಾನ್ ಹಸನ್ ಮತ್ತೆ ಕ್ಷಣ ಮಾತ್ರದಲ್ಲಿ ಎದ್ದು ಚೇತರಿಸಿಕೊಂಡು ಓಡಿ ಮೊದಲಿಗರಾಗಿ ಗುರಿ ಮುಟ್ಟಿದ್ದಾರೆ.
ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ 32ನೇ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ ನಡೆದ 1,500 ಮೀಟರ್ ಓಟದ ಸ್ಪರ್ಧೆಯಲ್ಲಿ ಸಿಫಾನ್ ಹಸನ್ ಮೊದಲಿಗರಾಗಿ ಗುರಿ ಮುಟ್ಟಿದ್ದಾರೆ.
ಪಂದ್ಯದ ಕೊನೆಯ ಲ್ಯಾಪ್ ನಲ್ಲಿ ಓಡುವಾಗ ಸಿಫಾ ಹಸನ್ ಮತ್ತು ಕೀನ್ಯಾದ ಓಟಗಾರ್ತಿ ಎಡಿನಾ ಜೆಬಿಟೋಕ್ ನಡುವೆ ಗೊಂದಲ ಉಂಟಾಗಿ ಇಬ್ಬರು ಪರಸ್ಪರ ಕಾಲಿಗೆ ಸಿಕ್ಕಿ ನೆಲಕ್ಕುರುಳಿದರು. ಆದರೆ ಕೂಡಲೇ ಸಿಫಾನ್ ಹಸನ್ ಚೇತರಿಸಿಕೊಂಡು ಮೇಲೆದ್ದು ತಮ್ಮ ಗುರಿಯತ್ತ ಮುನ್ನುಗ್ಗಿದರು. ಅಷ್ಟು ಹೊತ್ತಿಗಾಗಲೇ ತಮ್ಮ ಹಿಂದಿದ್ದ ಎಲ್ಲ ಸ್ಪರ್ಧಿಗಳು ಮುಂದಕ್ಕೆ ಹೋಗಿದ್ದರು. ಈ ವೇಳೆ ದೃತಿಗೆಡದ ಸಿಫಾನ್ ತಮ್ಮ ಓಟದ ವೇಗವನ್ನು ಹೆಚ್ಚಿಸಿ ಒಬ್ಬೊಬ್ಬರನ್ನಾಗಿ ಎಲ್ಲ ಅಥ್ಲೀಟ್ ಗಳನ್ನು ಹಿಂದಿಕ್ಕಿ ಕೇವಲ 4 ನಿಮಿಷ, 5.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಂಭ್ರಮಿಸಿದರು.
ಅಂತೆಯೇ ಈ ಗೆಲುವಿನ ಮೂಲಕ ಸಿಫಾನ್ ಹಸನ್ ಒಲಂಪಿಕ್ಸ್ ಕ್ರೀಡಾಕೂಟ 5000 ಮೀಟರ್ ಓಚದ ಸ್ಪರ್ಧೆಯ ಫೈನಲ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಸಿಫಾನ್ ಫೈನಲ್ ನಲ್ಲಿ 2 ಬಾರಿ ವಿಶ್ವ ಚಾಂಪಿಯನ್ ಕೀನ್ಯಾದ ಹೆಲೆನ್ ಒಬಿರಿರೊಂದಿಗೆ ಚಿನ್ನದ ಪದಕಕ್ಕಾಗಿ ಓಡುವ ನಿರೀಕ್ಷೆ ಇದೆ.
2019 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 1,500 ಮತ್ತು 10,000 ಮೀಟರ್ ಓಟದ ಸ್ಪರ್ಧೆ ಗೆದಿದ್ದ ಹಸನ್, ಟೋಕಿಯೊ ಗೇಮ್ಸ್‌ನಲ್ಲಿ 10,000 ಮೀಟರ್ ಓಟದಲ್ಲಿ ಭಾಗವಹಿಸಿ ಮೂರು ಪದಕಗಳಿಗಾಗಿ ಹೋರಾಡಲಿದ್ದಾರೆ.
ಈ ಪೈಕಿ ಇಂದೇ 2 ರೇಸ್ ಗಳಿದ್ದು, ಸಿಫಾನ್ ಸ್ಪರ್ಧೆ ನಡೆಸಲಿದ್ದು, ಮುಂದಿನ ಶುಕ್ರವಾರ ಮತ್ತು ಶನಿವಾರದಂದು 1,500 ಮತ್ತು 10,000 ಮೀಟರ್ ಸ್ಪರ್ಧೆಯ ಫೈನಲ್ ನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.