ಮಂಜೇಶ್ವರ: ಕೇರಳದಲ್ಲಿ ಕೋವಿಡ್ ಸೋಂಕು ಅಧಿಕಗೊಳ್ಳುತ್ತಿದೆ ಎಂಬ ನೆಪವೊಡ್ಡಿ ಕಾಸರಗೋಡು-ದಕ್ಷಿಣ ಕನ್ನಡ ಜಿಲ್ಲಾ ಗಡಿ ಪ್ರದೇಶಗಳಲ್ಲಿ ಕೇರಳದಿಂದ ಪ್ರವೇಶಿಸುವವರಿಗೆ ಶರತ್ತುಗಳನ್ನು ವಿಧಿಸುತ್ತಿರುವ ಕರ್ನಾಟಕ ಸರಕಾರ ತನ್ನ ನಿಲುವನ್ನು ಬದಲಿಸುವಂತೆ ಕೇರಳ ತುಳು ಅಕಾಡೆಮಿ ವಿನಂತಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೆÇಲೀಸ್ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಈ ವಿನಂತಿ ಮಾಡಲಾಗಿದೆ.
ಮಂಜೇಶ್ವರ, ಕಾಸರಗೋಡು ತಾಲೂಕುಗಳ ಬಹುತೇಕ ಜನ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ದಿನಂಪ್ರತಿ ಸಾವಿರಾರು ಮಂದಿ ವಿದ್ಯಾರ್ಥಿಗಳು, ಸಾರ್ವಜನಿಕರು ವಿವಿಧ ಅಗತ್ಯಗಳಿಗಾಗಿ ದ.ಕ.ಜಿಲ್ಲೆಗೆ ಹೋಗಿಬರುತ್ತಿದ್ದಾರೆ. ಇದೀಗ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ಪ್ರಮಾಣ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಡ್ಡಾಯಗೊಳಿಸಿದ್ದು, ಕಾಸರಗೋಡಿನ ಕನ್ನಡಿಗರು, ತುಳುವರು ಸಹಿತ ವಿವಿಧ ಭಾಷಿಗರು ಅತಂತ್ರರಾಗಿದ್ದಾರೆ. ಶಿಕ್ಷಣ, ಆಸ್ಪತ್ರೆ, ವಿಮಾನ, ರೈಲ್ವೇ ಹೀಗೆ ವಿವಿಧ ವಲಯಗಳನ್ನು ಆಶ್ರಯಿಸುವವರು ತೊಂದರೆಗೀಡಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರ ನೇತೃತ್ವದ ನಿಯೋಗವು ತಲಪ್ಪಾಡಿ ಗಡಿಯಲ್ಲಿ ದಕ್ಷಿಣ ಕನ್ನಡ ಪೆÇಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಈ ಮನವಿ ಸಲ್ಲಿಸಿದೆ. ಗಡಿಯನ್ನು ಯಾವುದೇ ಕಾರಣಕ್ಕೆ ಮುಚ್ಚಬಾರದು ಎಂಬ ನ್ಯಾಯಾಲಯದ ಆದೇಶವಿದ್ದು, ಗಡಿ ತೆರೆದು ಪ್ರವೇಶ ಸುಗಮಗೊಳಿಸುವಂತೆ ದ.ಕ.ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸುವುದಾಗಿ ಉಮೇಶ್ ಎಂ.ಸಾಲ್ಯಾನ್ ಈ ವೇಳೆ ತಿಳಿಸಿದರು. ನಿಯೋಗದಲ್ಲಿ ಅಕಾಡೆಮಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿಗಾರ್, ರಾಧಾಕೃಷ್ಣ ಉಳಿಯತ್ತಡ್ಕ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಮೊದಲಾದವರಿದ್ದರು.