ಕಾಸರಗೋಡು: ನಾಡಿನಾದ್ಯಂತ ಇಂದು(ಶುಕ್ರವಾರ) ವರ ಮಹಾಲಕ್ಷ್ಮಿ ಹಬ್ಬ ಸಂಭ್ರಮ. ಹೆಣ್ಣು ಮಕ್ಕಳು ಲಗುಬಗೆಯಿಂದ ಬೆಳಗ್ಗೆಯೇ ಎದ್ದು ಮನೆಯನ್ನೆಲ್ಲಾ ಸ್ವಚ್ಛಗೊಳಿಸಿ, ಮನೆ ಮುಂಗೆ ರಂಗೋಲಿ, ತೋರಣ ಹಾಕಿ ಹೊಸ ಬಟ್ಟೆ, ಆಭರಣ ತೊಟ್ಟು ದೇವಿಯ ಪೂಜೆಗೆ ಸಿದ್ಧರಾಗಿದ್ದಾರೆ.
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಕಾಸರಗೋಡು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೂ-ಹಣ್ಣುಗಳ ಮಾರಾಟ, ಖರೀದಿ ಭರಾಟೆ ಹೆಚ್ಚಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ನಿಯಂತ್ರಣಗಳಿವೆ. ಜನರು ಸಾಧ್ಯವಾದಷ್ಟು ಮನೆಗಳಲ್ಲಿಯೇ ತಮ್ಮ ತಮ್ಮ ಇಷ್ಟಾನುಸಾರ ದೇವಿಯ ಪೂಜೆ, ವ್ರತ, ಭಜನೆ ಮಾಡುವುದು ಒಳಿತು.
ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ವರ ಮಹಾಲಕ್ಷ್ಮಿ ಹಿಂದೂ ಜನರ ಪಾಲಿಗೆ ಅತ್ಯಂತ ಪವಿತ್ರ ಮತ್ತು ಮುಖ್ಯವಾದ ಹಬ್ಬವಾಗಿದೆ. ಕ್ಷೀರ ಸಮುದ್ರ ಸಂಭವೆ ಮಹಾಲಕ್ಷ್ಮಿ ನಿತ್ಯ ಶುದ್ಧಳು, ನಿತ್ಯ ಸಿದ್ದಳು. ಸೃಷ್ಟಿಯ ಎಲ್ಲಾ ಸುವಸ್ತುಗಳಲ್ಲಿ ನೆಲೆಸಿರುವಳು. ಜಗನ್ಮಾತೆಯು ಸರ್ವರಿಗೂ ಸುಖ, ಸಂತೋಷ, ಸಮೃದ್ಧಿಗಳನ್ನು ಕರುಣಿಸಲಿ, ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.