ಕಾಸರಗೋಡು: ಪ್ರಾಚೀನ ಗಮಕ ಕಲೆ ಭಾರತೀಯ ಸಂಸ್ಕøತಿಯ ದ್ಯೋತಕವಾಗಿದೆ. ಶ್ರಾವಣ ಮಾಸದಲ್ಲಿ ಶ್ರೀಮದ್ರಾಮಾಯಣದ ವಾಚನ-ವ್ಯಾಖ್ಯಾನಗಳನ್ನು ಮಾಡುವುದರಿಂದ ಮಾನವರ ಜೀವನವು ಸಾರ್ಥಕವಾಗುವುದು ಎಂದು ಕಾಸರಗೋಡು ನಗರಸಭಾ ಸದಸ್ಯೆ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಸವಿತಾ ಐ ಭಟ್ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆದಿ ಗಮಕಿಗಳಾದ ಕುಶಲವರ ಜನ್ಮಮಾಸಾಚರಣೆಯ ಸರಣಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಶುಕ್ರವಾರ ಕಾಸರಗೋಡಿನ ವಿದ್ಯಾನಗರದ ಚಿನ್ಮಯ ಕಾಲನಿಯ ಶ್ರೀಕೃಷ್ಣ ಮಂದಿರದಲ್ಲಿ ಮಾತನಾಡುತ್ತಿದ್ದರು.
ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಭಾರತೀಯರ ಆರಾಧ್ಯಮೂರ್ತಿಯಾಗಿದ್ದಾನೆ. ಅಂಥವನ ದಿವ್ಯಕಥೆಯನ್ನು ನಾವೆಲ್ಲರೂ ಗೌರವದಿಂದ ಮನನ ಮಾಡಬೇಕು ಎಂದವರು ತಿಳಿಸಿದರು.
ನಿವೃತ್ತ ಆರ್.ಡಿ.ಒ. ಸಿ.ಕುಮಾರ್ ಅವರು ದೀಪ ಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿದರು. ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ತೊರವೆ ರಾಮಾಯಣದ ಪಾದುಕಾ ಪ್ರದಾನದ ಆಯ್ದಭಾಗವನ್ನು ನಿವೃತ್ತ ಶಿಕ್ಷಕಿ ಪುಷ್ಪಲತ ವಿ.ಕೆ.ಭಟ್ ಅವರು ವಾಚನ ಮಾಡಿದರು. ಶಿಕ್ಷಕ ಶ್ರೀಶ ಕುಮಾರ್ ಪಂಜಿತ್ತಡ್ಕ ಅವರು ವ್ಯಾಖ್ಯಾನ ಗೈದರು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮತ್ತು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೈ.ವಿ.ರಮೇಶ್ ಅತಿಥಿಗಳನ್ನು ಗೌರವಿಸಿದರು. ಪದ್ಮಿನಿ ಟೀಚರ್ ವಂದಿಸಿದರು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ದಿ.ಕುಳಮರ್ವ ವೆಂಕಪ್ಪ ಭಟ್ಟರು ತಾಳೆಯೋಲೆಗಳಲ್ಲಿ ಉಕ್ಕಿನ ಕಂಠದ ಸಹಾಯದಿಂದ ಬರೆದ "ತೊರವೆ ರಾಮಾಯಣದ" ಬೃಹತ್ ಗ್ರಂಥವು ವೇದಿಕೆಯ ಪ್ರಧಾನ ಆಕರ್ಷಣೆಯಾಗಿತ್ತು.