ಕಾಸರಗೋಡು: ಮರಗೆಣಸು ಕೃಷಿ ಮಾಡಿ, ಇದಕ್ಕೆ ಸೂಕ್ತ ಮಾರುಕಟ್ಟೆ ಕಂಡುಕೊಳ್ಳಲಾಗದೆ ಸಂಕಷ್ಟ ಎದುರಿಸುತ್ತಿದ್ದ ಎಳುಂಬನ್ ಎಂಬವರಿಗೆ ಕೃಷಿ ಇಲಾಖೆ ಸಹಾಯ ಹಸ್ತ ಚಾಚಿದೆ. ಸುಭಿಕ್ಷ ಕೇರಳ ಯೋಜನೆಯನ್ವಯ ಎಳುಂಬನ್ ಅವರು ಮರಗೆಣಸು ಕೃಷಿ ನಡೆಸಿದ್ದು, ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಒಂದು ಕ್ವಿಂಟಾಲಿಗೂ ಹೆಚ್ಚು ಮರಗೆಣಸು ಮಾರಾಟ ಮಾಡಲಾಗದೆ ಉಳಿದುಕೊಂಡಿತ್ತು.
ಅತ್ಯಂತ ಶ್ರಮವಹಿಸಿ, ಹಣ ಹೂಡಿ ಕೃಷಿ ನಡೆಸಿದ್ದ ವೆಳುಂಬನ್ ಅವರಿಗೆ ಲಾಕ್‍ಡೌನ್ ಶಾಪವಾಗಿ ಪರಿಣಮಿಸಿದ್ದು, ಕೊನೆಗೂ ಇವರಿಗೆ ಕೃಷಿಭವನ, ಕೃಷಿ ಕ್ರಿಯಾಸಮಿತಿ ಹಾಗೂ ಸವಾಕ್ ಕಲಾವಿದರ ತಂಡ ಮರಗೆಣಸು ಮಾರಾಟಕ್ಕೆ ಸಹಾಯ ಒದಗಿಸಿದೆ. ವೆಳುಂಬನ್ ಅವರ ಮರಗೆಣಸನ್ನು ಕೃಷಿ ಇಲಾಖೆಯ ಕೃಷಿ ವಿಜ್ಞಾನ್ ಕೇಂದ್ರದ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪ್ಯಾಕ್ ಮಾಡಿ, ಮಾರುಕಟ್ಟೆಗಿಳಿಸಿದ್ದರು. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಮೊದಲ ಮಾರಾಟ ಆಯೋಜಿಸಲಾಗಿತ್ತು. ಸಿವಿಲ್‍ಸ್ಟೇಶನ್ ನೌಕರರು, ಅಧಿಕಾರಿಗಳು ಗ್ರಾಹಕರಾಗಿ ಮರಗೆಣಸು ಖರೀದಿಸಿದರು. ಒಂದರಿಂದ ಐದು ಕಿಲೋ ವರೆಗಿನ ಪ್ರತ್ಯೇಕ ಪ್ಯಾಕ್‍ಗಳನ್ನು ಮಾರಾಟಕ್ಕಿರಿಸಲಾಗಿತ್ತು. ಮಾರಾಟ ಮಾಡಿ ಬಂದ ಹಣವನ್ನು ವೆಳುಂಬನ್ ಹಾಗೂ ಕೃಷಿ ಕ್ರಿಯಾಸಮಿತಿಯ ರುಕ್ಮಿಣಿ ಅವರ ಚಿಕಿತ್ಸೆಗೆ ಭರಿಸಲು ತೀರ್ಮಾನಿಸಲಾಗಿದೆ.