ನವದೆಹಲಿ: ಅಫ್ಘಾನಿಸ್ತಾನದ ಸೇನಾ ಪಡೆಗಳು ಹಾಗೂ ತಾಲಿಬಾನಿಗಳ ನಡುವಿನ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ಆ ದೇಶದಲ್ಲಿರುವ ತನ್ನೆಲ್ಲಾ ನಾಗರಿಕರಿಗೆ ಭಾರತಕ್ಕೆ ವಾಪಸಾಗುವಂತೆ ತಿಳಿಸಲಾಗಿದ್ದು, ಇಂದು ಸಂಜೆ ಅಫ್ಘಾನಿಸ್ತಾನದ ನಾಲ್ಕನೇ ಅತ್ಯಂತ ದೊಡ್ಡ ನಗರವಾದ ಮಝರ್-ಇ-ಶರೀಫ್‍ನಿಂದ ಭಾರತೀಯರನ್ನು ಹೊತ್ತ ವಿಶೇಷ ವಿಮಾನ ತಾಯ್ನಾಡಿಗೆ ಪ್ರಯಾಣ ಬೆಳೆಸಲಿದೆ ಎಂದು ndtv.com ವರದಿ ಮಾಡಿದೆ.
ಮಝರ್-ಇ-ಶರೀಫ್ ಸುತ್ತಮುತ್ತಲು ವಾಸಿಸುವ ಭಾರತೀಯರು ಈ ವಿಶೇಷ ವಿಮಾನದಲ್ಲಿ ಇಂದು ಸಂಜೆಯೊಳಗಾಗಿ ನಿರ್ಗಮಿಸಬೇಕು ಎಂದು ಅಲ್ಲಿನ ಭಾರತೀಯ ಕಾನ್ಸುಲೇಟ್ ಟ್ವೀಟ್ ಮಾಡಿದೆ.
ತಾಯ್ನಾಡಿಗೆ ವಾಪಸಾಗಲು ಇಚ್ಛಿಸುವವರು ತಮ್ಮ ಪೂರ್ಣ ಹೆಸರು ಹಾಗೂ ಪಾಸ್‍ಪೋರ್ಟ್ ಸಂಖ್ಯೆಯನ್ನು ಕಾನ್ಸುಲೇಟ್‍ಗೆ ತಕ್ಷಣ ಒದಗಿಸಬೇಕೆಂದು ಸೂಚಿಸಲಾಗಿದೆ. ಸರಕಾರದ ಅಂಕಿಅಂಶಗಳಂತೆ ಅಫ್ಘಾನಿಸ್ತಾನದಲ್ಲಿ ಸುಮಾರು 1,500 ಭಾರತೀಯರು ವಾಸವಾಗಿದ್ದಾರೆ.
ಕಳೆದ ತಿಂಗಳು ಭಾರತ ಕಂದಹಾರ್ ನಿಂದ ತನ್ನ ಸುಮಾರು 50 ರಾಜತಾಂತ್ರಿಕರು ಹಾಗೂ ಭದ್ರತಾ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿತ್ತು.
ತಮ್ಮ ಮುಂದಿನ ಗುರಿ ಮಝರ್-ಇ-ಶರೀಫ್ ಎಂದು ತಾಲಿಬಾನಿಗಳು ಹೇಳಿರುವುದರಿಂದ ಭಾರತ ಸರಕಾರ ಭಾರತೀಯರಿಗೆ ವಾಪಸಾಗಲು ವಿಶೇಷ ವಿಮಾನದ ಏರ್ಪಾಟು ಮಾಡಿದೆ.