ಪಶ್ತೋ ಭಾಷೆಯಲ್ಲಿ ತಾಲಿಬಾನ್ ಅಂದರೆ 'ವಿದ್ಯಾರ್ಥಿಗಳು' ಎಂಬ ಅರ್ಥವಿದೆ. 1994ರಲ್ಲಿ ಕಂದಹಾರ್ ಬಳಿ ಈ ಸಂಘಟನೆ ಪ್ರವರ್ಧಮಾನಕ್ಕೆ ಬಂದಿತು. ಸೋವಿಯತ್ ಒಕ್ಕೂಟದ ವಾಪಸಾತಿ ಮತ್ತು ಆ ಬಳಿಕ ಸರ್ಕಾರದ ಪತನದ ನಂತರ, ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಅಂತರ್ಯುದ್ಧ ಶುರುಮಾಡಿತು. ಅಮೆರಿಕದ ಬೆಂಬಲದೊಂದಿಗೆ 1980ರಲ್ಲಿ ಸೋವಿಯತ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದ 'ಮುಜಾಹಿದೀನ್' ಹೋರಾಟಗಾರರನ್ನು ಈ ಸಂಘಟನೆ ಸೆಳೆಯಿತು.
ಎರಡು ವರ್ಷಗಳ ಅಂತರದಲ್ಲಿ, ದೇಶದ ಬಹುತೇಕ ಭಾಗಗಳ ಮೇಲೆ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸಿತು. ಇಸ್ಲಾಮಿಕ್ ಕಾನೂನಿನ ಕಠಿಣ ವ್ಯಾಖ್ಯಾನದೊಂದಿಗೆ 1996ರಲ್ಲಿ 'ಇಸ್ಲಾಮಿಕ್ ಎಮಿರೇಟ್' ಎಂಬುದಾಗಿ ಘೋಷಿಸಿಕೊಂಡಿತು. ತನ್ನದೇ ಕಾನೂನು ಜಾರಿಗೆ ತಂದಿತು.
2001ರ ಸೆಪ್ಟೆಂಬರ್ 11ರಂದು ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಕಟ್ಟಡಗಳನ್ನು ಅಲ್ ಖೈದಾ ಉಗ್ರರು ಧ್ವಂಸಗೊಳಿಸಿದ ಬಳಿಕ ಅಮೆರಿಕವು ಕಾಬೂಲ್‌ನಲ್ಲಿ ಭಾರಿ ವೈಮಾನಿಕ ದಾಳಿ ನಡೆಸಿತು. ಅಲ್ಲಿಂದ 20 ವರ್ಷಗಳ ಸೇನಾ ನಿಯೋಜನೆ ಶುರುವಾಯಿತು. ಈ ಅವಧಿ ಇದೇ ಆಗಸ್ಟ್ 31ರಂದು ಕೊನೆಯಾಗಲಿದ್ದು, ಅಮೆರಿಕವು ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ.
ಸಂಘಟನೆ ಸಿದ್ದಾಂತ
ತಾಲಿಬಾನ್ ಷರಿಯಾ ಕಾನೂನಿನ ಕಠಿಣ ರೂಪವನ್ನು ಜಾರಿಗೊಳಿಸಿತ್ತು. ಮಹಿಳೆಯರು ಕೆಲಸ ಮಾಡುವುದನ್ನು ಅಥವಾ ಅಧ್ಯಯನ ಮಾಡುವುದನ್ನು ನಿರ್ಬಂಧಿಸಿತ್ತು. ಅವರು ಒಬ್ಬಂಟಿಯಾಗಿ ಮನೆಬಿಟ್ಟು ಹೊರಬರುವಂತಿರಲಿಲ್ಲ. ಸಾರ್ವಜನಿಕವಾಗಿ ಮರಣದಂಡನೆ ಮತ್ತು ಚಾಟಿ ಏಟಿನ ಶಿಕ್ಷೆ ನೀಡುವುದು ಸಾಮಾನ್ಯವಾಗಿತ್ತು.
ಅಫ್ಗಾನಿಸ್ತಾನಕ್ಕೆ 'ನೈಜ ಇಸ್ಲಾಮಿಕ್ ವ್ಯವಸ್ಥೆ'ಯನ್ನು ಕಲ್ಪಿಸಲು ಬಯಸಿದ್ದಾಗಿ ತಾಲಿಬಾನ್ ಈ ವರ್ಷಾರಂಭದಲ್ಲಿ ಹೇಳಿತ್ತು.
ಅಂತರರಾಷ್ಟ್ರೀಯ ಮಾನ್ಯತೆ ಇಲ್ಲ
ನೆರೆಯ ಪಾಕಿಸ್ತಾನ, ಚೀನಾ ಸೇರಿದಂತೆ ಮೂರ್ನಾಲ್ಕು ದೇಶಗಳು ಮಾತ್ರ ಈ ಹಿಂದೆ ಅಧಿಕಾರದಲ್ಲಿ ಇದ್ದ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ನೀಡಿದ್ದವು.