ನವದೆಹಲಿ: ಮೊಹರಂನಿಂದ ದುರ್ಗಾಪೂಜೆಯ ವರೆಗೂ ಸ್ಥಳೀಯ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ, ಆಗಸ್ಟ್ 19ರಂದು ಮೊಹರಂ ಇದ್ದು ಅಕ್ಟೋಬರ್ 15ಕ್ಕೆ ದುರ್ಗಾಪೂಜೆಯಿರುವ ಕಾರಣ ಸಾಕಷ್ಟು ಮಂದಿ ಗುಂಪು ಸೇರುವ ಸಾಧ್ಯತೆ ಇದೆ ಹೀಗಾಗಿ ನಿರ್ಬಂಧಗಳನ್ನು ಮುಂದುವರೆಸುವಂತೆ ಸೂಚನೆ ನೀಡಲಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಆಂಡ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಹಬ್ಬಗಳ ಕುರಿತು ಆತಂಕ ವ್ಯಕ್ತಪಡಿಸಿದೆ. ಈ ಹಬ್ಬಗಳೇ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ ಹೀಗಾಗಿ ಯಾವುದೇ ಕಾರಣಕ್ಕೂ ಗುಂಪು ಸೇರುವಿಕೆಗೆ ಅವಕಾಶ ಮಾಡಿಕೊಡಬಾರದು ಎಂದು ಹೇಳಲಾಗಿದೆ.
ಕೊರೊನಾದ ಎರಡನೇ ಅಲೆ ಮುಕ್ತಾಯವಾಗಿಲ್ಲ, ಡೆಲ್ಟಾ ರೂಪಾಂತರಿಯು ವೇಗವಾಗಿ ಹರಡುತ್ತಿದೆ ಹೀಗಾಗಿ ಯಾವುದೇ ಕಾರಣಕ್ಕೂ ಮೈಮರೆಯಬೇಡಿ ಎಂದು ಆರೋಗ್ಯ ಇಲಾಖೆ ಹೇಳಿದೆ.
8 ರಾಜ್ಯಗಳಲ್ಲಿ ಕೋವಿಡ್-19 ಪುನರುತ್ಪಾದಕ ಸಂಖ್ಯೆ 1 ಕ್ಕಿಂತ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತದಲ್ಲಿ ಮೂರು ತಿಂಗಳಲ್ಲೇ ಮೊದಲ ಬಾರಿಗೆ ಸೋಂಕು ಪತ್ತೆ ಪರೀಕ್ಷೆ ಪ್ರಮಾಣ ಶೇ.2 ಕ್ಕೆ ಕುಸಿದಿದ್ದು, 8 ರಾಜ್ಯಗಳಲ್ಲಿ ಆರ್ ವ್ಯಾಲ್ಯೂ ಜೊತೆಗೆ ಘಾತೀಯ ಬೆಳವಣಿಗೆ 1 ಕ್ಕಿಂತ ಹೆಚ್ಚಿರುವುದು ಆತಂಕ ಮೂಡಿಸಿದೆ.
ದೇಶದ ಒಟ್ಟಾರೆ ಆರ್ ಫ್ಯಾಕ್ಟರ್ 1.2 ರಷ್ಟಿದ್ದು ಅಮೆರಿಕ, ಕೆನಡಾ, ಆಸ್ಟ್ರೇಲಿಯಾದಷ್ಟೇ ಇದೆ. ಓರ್ವ ಸೋಂಕಿತ ವ್ಯಕ್ತಿಯಿಂದ ಹರಡುವ ಸೋಂಕಿನಿಂದ ಎಷ್ಟು ಮಂದಿ ಸೋಂಕಿತರಾಗುತ್ತಾರೆ ಎಂಬುದಕ್ಕೆ ಆರ್ ಫ್ಯಾಕ್ಟರ್ ಎನ್ನಲಾಗುತ್ತದೆ. ಓರ್ವ ಸೋಂಕಿತ ಒಂದಕ್ಕಿಂತ ಹೆಚ್ಚು ಮಂದಿಗೆ ಸೋಂಕು ಹರಡಿಸಬಹುದಾಗಿರುವುದನ್ನು ಆರ್ ಫ್ಯಾಕ್ಟರ್ ಎನ್ನಲಾಗುತ್ತದೆ.
ಆರ್ ವ್ಯಾಲ್ಯೂ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಲಕ್ಷದ್ವೀಪ, ತಮಿಳುನಾಡು, ಮಿಜೊರಾಮ್, ಕರ್ನಾಟಕಗಳಲ್ಲಿ 1.2 ಕ್ಕಿಂತ ಹೆಚ್ಚಿದೆ, ಕೆಲವೊಂದು ರಾಜ್ಯಗಳಲ್ಲಿ ಆರ್ ಫ್ಯಾಕ್ಟರ್ ಹೆಚ್ಚಳವಾಗುತ್ತಿರುವುದರ ಬಗ್ಗೆ ಆತಂಕವಿದೆ. ವೈರಾಣು ಪ್ರಸರಣ ವಿಸ್ತರಿಸುತ್ತಿದೆ. ಅದನ್ನು ತಡೆಗಟ್ಟಬೇಕು ಎಂದು ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಹೇಳಿದ್ದಾರೆ.
"ಡೆಲ್ಟಾ ರೂಪಾಂತರವು ಒಂದು ಪ್ರಬಲ ಸಮಸ್ಯೆಯಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಇನ್ನೂ ಉಲ್ಬಣಗೊಳ್ಳುತ್ತಿದೆ ಮತ್ತು ನಮ್ಮ ದೇಶದಲ್ಲಿ ಎರಡನೇ ಅಲೆಯು ಮುಂದುವರಿದಿದೆ," ಎಂದು ಡಾ ಪೌಲ್ ಹೇಳಿದರು. ವೈರಸ್‌ನ ಆರ್-ಫ್ಯಾಕ್ಟರ್ ಅಥವಾ ಕೊರೊನಾ ವೈರಸ್‌ನ ಹರಡುವಿಕೆ ದರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
"ಆರ್ ಸಂಖ್ಯೆಯು 0.6 ಅಥವಾ ಅದಕ್ಕಿಂತ ಕಡಿಮೆ ಇರಬೇಕು ಎಂಬುದನ್ನು ದಯವಿಟ್ಟು ನೆನಪಿಡಿ. ಅದು 1 ಕ್ಕಿಂತ ಹೆಚ್ಚಿದ್ದರೆ, ಇದು ಗಮನಾರ್ಹ ಸಮಸ್ಯೆ ಎಂದು ತೋರಿಸುತ್ತದೆ ಮತ್ತು ಕೊರೊನಾ ವೈರಸ್ ಹರಡಲು ಅಧಿಕ ಕಾರಣವಾಗುತ್ತದೆ," ಎಂದು ಡಾ. ವಿ. ಕೆ. ಪೌಲ್ ಹೇಳಿದರು.
ಕೋವಿಡ್ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆಕೋವಿಡ್ 3 ನೇ ಅಲೆ ಭೀತಿ: 11 ವಾರಗಳ ಕುಸಿತದ ನಂತರ ದೇಶದಲ್ಲಿ ಪ್ರಕರಣಗಳು ಶೇ.7.5 ಏರಿಕೆ
"ಹಿಂದಿನ ವಾರಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಹೊಂದಿರುವ ಜಿಲ್ಲೆಗಳ ಸಂಖ್ಯೆ ಕಡಿಮೆಯಾಗಿದೆ. ಹಾಗೆಯೇ ಪ್ರತಿ ರಾಜ್ಯದಲ್ಲೂ, ಹೆಚ್ಚಿನ ಕೋವಿಡ್ ಪ್ರರಕಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹಿಂದಿನ ವಾರಕ್ಕಿಂತ ಕಡಿಮೆಯಾಗಿದೆ. ಆದರೆ ಈಗ ಹೊಸ ರಾಜ್ಯಗಳಲ್ಲಿ ಈ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಜಿಲ್ಲೆಗಳಲ್ಲಿ ಕಂಡು ಬರುತ್ತಿದೆ," ಎಂದು ಡಾ. ವಿ. ಕೆ. ಪೌಲ್ ಮಾಹಿತಿ ನೀಡಿದರು.