ಮುಂಬೈ: ಮಹಾಡ್ ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಸಚಿವ ನಾರಾಯಣ್ ರಾಣೆ ಅವರಿಗೆ ಮಂಗಳವಾರ ರಾತ್ರಿ ಜಾಮೀನು ಮಂಜೂರು ಮಾಡಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಕ್ಕೆ ಬಾರಿಸುವೆ ಎಂಬ ಹೇಳಿಕೆ ನೀಡಿರುವುದಕ್ಕೆ ಮಹಾರಾಷ್ಟ್ರದ ವಿವಿಧೆಡೆ ಶಿವಸೇನೆ ನಾಯಕರಿಂದ ದೂರು ದಾಖಲಾದ ಕಾರಣ ಮಂಗಳವಾರ ಮಧ್ಯಾಹ್ನ ಪೊಲೀಸರು ರಾಣೆಯವರನ್ನು ರತ್ನಗಿರಿಯಲ್ಲಿ ಬಂಧಿಸಿದ್ದರು.
ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸೇರ್ಪಡೆಯಾದ ಬಿಜೆಪಿ ನಾಯಕ ರಾಣೆ, 20 ವರ್ಷಗಳಲ್ಲಿ ಬಂಧನಕ್ಕೊಳಗಾದ ಮೊದಲ ಕೇಂದ್ರ ಸಚಿವರಾಗಿದ್ದರು. ಅವರ ಬಂಧನವು ಪ್ರತಿಸ್ಪರ್ಧಿಗಳಾದ ಶಿವಸೇನೆ ಹಾಗೂ ಬಿಜೆಪಿ ನಡುವಿನ ಹೊಸ ಹೊಯ್ದಾಟಕ್ಕೆ ಕಾರಣವಾಗಿದೆ.