ಗುವಾಹಟಿ: 2024ರಲ್ಲಿ ಕೇಂದ್ರದಲ್ಲಿ ಅಧಿಕಾರದಿಂದ ಬಿಜೆಪಿಯನ್ನು ಕಿತ್ತೊಗೆಯಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಾಯಕತ್ವದಡಿ ಪ್ರಾದೇಶಿಕ ಪಕ್ಷಗಳ ಮೈತ್ರಿ ಮಾಡಿಕೊಳ್ಳಲಾಗುವುದು ಎಂದು ರೈಜೋರ್ ದಳದ ಮುಖ್ಯಸ್ಥ ಅಖಿಲ್ ಗೊಗೊಯ್ ಭಾನುವಾರ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನೊಂದಿಗೆ ರೈಜೋರ್ ದಳವನ್ನು ವಿಲೀನಗೊಳಿಸಲು ಬ್ಯಾನರ್ಜಿ ಆಹ್ವಾನ ನೀಡಿದ್ದಾರೆ. ಪ್ರಾದೇಶಿಕ ಶಕ್ತಿಗಳ ಒಕ್ಕೂಟ ರಚಿಸುವ ಗುರಿ ಹೊಂದಿದ್ದೇವೆ. 2024ರಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಅಧಿಕಾರದಿಂದ ತೆಗೆಯಲು ಮಮತಾ ಬ್ಯಾನರ್ಜಿಯನ್ನು ಪ್ರಾದೇಶಿಕ ಪಕ್ಷಗಳ ಒಕ್ಕೂಟದ ನಾಯಕಿಯಾಗಿ ಪ್ರತಿಬಿಂಬಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ತೃಣಮೂಲ ಪಕ್ಷದೊಂದಿಗೆ ಒಂದು ವೇಳೆ ರೈ ಜೋರ್ ವಿಲೀನವಾದರೆ ಅಸ್ಸಾಂ ಟಿಎಂಸಿ ಘಟಕದ ಅಧ್ಯಕ್ಷ ಸ್ಥಾನ ನೀಡುವುದಾಗಿ ಮಮತಾ ಬ್ಯಾನರ್ಜಿ ಹೇಳಿರುವುದಾಗಿ ಗೊಗೊಯ್ ಹೇಳಿದರು. ಈ ಕುರಿತ ನಿರ್ಣಯವನ್ನು ನಮ್ಮ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಸಂಬಂಧ ಟಿಎಂಸಿ ಹಾಗೂ ರೈಜೋರ್ ದಳದ ನಡುವೆ ಮೂರು ಸುತ್ತಿನ ಮಾತುಕತೆ ಈಗಾಗಲೇ ನಡೆದಿದೆ ಎಂದು ಅವರು ತಿಳಿಸಿದರು.