ಮುಂಬೈ: ಕೆಲವು ರಾಜ್ಯಗಳಲ್ಲಿ ವಿಮಾನ ಅಥವಾ ಟ್ರೈನ್ ಪ್ರಯಾಣಕ್ಕೆ ಕೋವಿಡ್ ಪರೀಕ್ಷೆಗೊಳಪಟ್ಟು, ನೆಗೆಟೀವ್ ವರದಿಯನ್ನು ತೋರಿಸಬೇಕೆಂಬ ನಿಯಮವಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡು, ಹಣಕ್ಕಾಗಿ ಜನರಿಗೆ ನಕಲಿ ಕೋವಿಡ್ ನೆಗೆಟೀವ್ ರಿಪೋರ್ಟ್ ನೀಡುತ್ತಿದ್ದ ಸೈಬರ್ ಕೆಫೆ ಆಪರೇಟರ್ಅನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಮುಂಬೈನ ಭೇಂಡಿ ಬಜಾರ್ ಪ್ರದೇಶದಲ್ಲಿನ ಸೈಬರ್ ಕೆಫೆಯೊಂದರಲ್ಲಿ ಸುಳ್ಳು ಕೋವಿಡ್ ನೆಗೆಟೀವ್ ವರದಿಗಳನ್ನು ನೀಡುತ್ತಿರುವ ಬಗ್ಗೆ ಸುಳಿವು ಬಂದಿತ್ತು. ಈ ಹಿನ್ನೆಲೆಯಲ್ಲಿ ಅಪರಾಧ ವಿಭಾಗದ ಪೊಲೀಸರು ಬುಧವಾರ ಸಂಜೆ, ಸಿಬ್ಬಂದಿಯೋರ್ವನನ್ನು ಗ್ರಾಹಕನ ಸೋಗಿನಲ್ಲಿ ಅಲ್ಲಿಗೆ ಕಳುಹಿಸಿದರು. ಕೆಫೆಯಾತ 700 ರೂಪಾಯಿ ಪಡೆದು ಲ್ಯಾಬೊರೇಟರಿ ಹೆಸರಿನಲ್ಲಿ ಆರ್ಟಿಪಿಸಿಆರ್ ಟೆಸ್ಟ್ನ ನೆಗೆಟೀವ್ ವರದಿ ನೀಡಿದ ಎನ್ನಲಾಗಿದೆ.
ನಂತರ ಸ್ಥಳದ ಮೇಲೆ ರೇಡ್ ಮಾಡಿದ ಪೊಲೀಸರು ಕೆಲವು ನಕಲಿ ಸರ್ಟಿಫಿಕೇಟುಗಳನ್ನೂ, ಲ್ಯಾಬೊರೇಟರಿಯ ಲೆಟರ್ಹೆಡ್ಗಳನ್ನೂ, ಕಂಪ್ಯೂಟರ್ ಮತ್ತಿತರ ಉಪಕರಣಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ.