ಮಲಪ್ಪುರಂ : ಎರ್ನಾಕುಳಂ ಜಿಲ್ಲೆಯಲ್ಲಿ ಪತ್ತೆಹಚ್ಚಿರುವ ಸಮಾಂತರ ಎಕ್ಸ್‍ಚೇಂಜ್ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಚಿನ್ನಕಳ್ಳಸಾಗಾಟ, ಹವಾಲಾ ಜಾಲದವರಿಗೆ ಸಹಾಯಮಾಡುವ ನಿಟ್ಟಿನಲ್ಲಿ ಈ ಎಕ್ಸ್‍ಚೇಂಜ್ ಕಾರ್ಯಾಚರಿಸುತ್ತಿರುವುದನ್ನು ಪತ್ತೆಮಾಡಲಾಗಿದೆ. ಎರ್ನಾಕುಳಂ ಹಾಗೂ ತೃಶ್ಯೂರ್ ಜಿಲ್ಲೆಗಳ 14ಕೇಂದ್ರಗಳಲ್ಲಿ ಈ ಎಕ್ಸ್‍ಚೇಂಜ್ ಚಟುವಟಿಕೆ ನಡೆಸುತ್ತಿದೆ. ಈ ಹಿಂದೆ ದಕ್ಷಿಣಕೇರಳದ ಕೆಲವು ಸ್ಥಳದಲ್ಲಿ ಪತ್ತೆಹಚ್ಚಲಾಗಿದ್ದ ಎಕ್ಸ್‍ಚೇಂಜ್ ನಿರ್ವಹಿಸುತ್ತಿದ್ದವರ ಜತೆ ಈ ತಂಡಕ್ಕೂ ನಂಟಿರುವುದನ್ನು ಪತ್ತೆಹಚ್ಚಲಾಗಿದೆ. ಸಮಾಂತರ ಎಕ್ಸ್‍ಚೇಂಜ್‍ಗೆ ಬೇಕಾದ ಸಲಕರಣೆ ಬೆಂಗಳೂರಿನಿಂದ ಖರೀದಿಸಿರುವುದಾಗಿಯೂ ಸಂಶಯಿಸಲಾಗಿದೆ. ಇವರಿಗೆ ಭಯೋತ್ಪಾದಕ ಸಂಘಟನೆಗಳ ಸಂಪರ್ಕವಿರುವ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕಾಗಿದೆ. ಸಮಾಂತರ ಎಕ್ಸ್‍ಚೇಂಜ್ ನಡೆಸುತ್ತಿದ್ದ ಪ್ರಕರಣದ ಮುಖ್ಯ ಆರೋಪಿಗಳಾಗಿರುವ ಮಲಪ್ಪುರಂ ನಿವಾಸಿ ಸಲೀಂ, ಇಬ್ರಾಹಿಂ ಎಂಬವರಿಗಾಗಿ ಹುಡುಕಾಟ ನಡೆಯುತ್ತಿದೆ.
ಐ.ಎಸ್.ಐ ನಂಟು?:
ಸಮಾಂತರ ಎಕ್ಸ್‍ಚೇಂಜ್ ನಡೆಸಿ, ಬಂಧನಕ್ಕೀಡಾಗಿರುವ ಮಲಪ್ಪುರಂ ಕಾಡಾಂಬುಳ ನಿವಾಸಿ ಇಬ್ರಾಹಿಂ ಬಳಸಿರುವ ಉಪಕರಣಗಳು ಪಾಕ್ ಗೂಢಚಾರ ಸಂಘಟನೆ ಐ.ಎಸ್.ಐ ನೀಡಿರುವುದಾಗಿ ಸಂಶಯಿಸಲಾಗಿದ್ದು, ಈ ಮೂಲಕ ಸಮಾಂತರ ಎಕ್ಸ್‍ಚೇಂಜ್ ದಂಧೆಗೆ ಪಾಕಿಸ್ತಾನದ ನಂಟು ಹೊಂದಿರುವುದು ಖಚಿತವಾಗಿದೆ. ಕೇರಳ ಮಾತ್ರವಲ್ಲ ದೇಶಾದ್ಯಂತ ಇಂತಹ ಸಮಾಂತರ ಎಕ್ಸ್‍ಚೇಂಜ್‍ಗಳು ಕಾರ್ಯಾಚರಿಸುತ್ತಿರುವ ಬಗ್ಗೆಯೂ ಸಂಶಯ ವ್ಯಕ್ತವಾಗಿದೆ. ಎಸ್‍ಡಿಪಿಐ ಸಂಘಟನೆ ಸಕ್ರಿಯ ಸದಸ್ಯನಾಗಿದ್ದ ಇಬ್ರಾಹಿಂ, 2007ರಲ್ಲಿ ಕೋಟ್ಟಕ್ಕಲ್ ಪೊಲೀಸ್ ಠಾಣೆ ಅತಿಕ್ರಮಿಸಿದ ಕೇಸಿನಲ್ಲಿ ಆರೋಪಿಯಾಗಿದ್ದಾನೆ. ಸಮಾಂತರ ಎಕ್ಸ್‍ಚೇಂಜ್ ಮೂಲಕ ಸೇನೆ ಒಳಗೊಂಡಂತೆ ಪ್ರಮುಖ ಕಚೇರಿಗಳ ಸಮಗ್ರ ಮಾಹಿತಿಯನ್ನೂ ಕಲೆಹಾಕುತ್ತಿದ್ದರೆನ್ನಲಾಗಿದೆ.