ಕಣ್ಣೂರು: ಮಲಯಾಳಂನ ಖ್ಯಾತ ಯೂಟ್ಯೂಬ್ ಚಾನೆಲ್ ʼಇ ಬುಲ್ ಜೆಟ್ʼ ನ ನಿರ್ವಾಹಕರಾದ ಎಬಿನ್ ಹಾಗೂ ಲಿಬಿನ್ ಸಹೋದರರನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅವರು ಆರ್ಟಿಒ ಕಚೇರಿಯಲ್ಲಿ ದಾಂಧಲೆ ಉಂಟು ಮಾಡಿದ್ದಾರೆ ಮತ್ತು ಕರ್ತವ್ಯದಲ್ಲಿರುವ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣದ ಮೇರೆಗೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಅವರು ಆರ್ಟಿಒ ಕಚೇರಿಯಲ್ಲಿ ದಾಂಧಲೆ ನಡೆಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದು, ಬಳಿಕ ಅಲ್ಲಿನ ವಸ್ತುಗಳಿಗೆ ಹಾನಿಯೆಸಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದೇವೆ ಎಂದು ಕಣ್ಣೂರು ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 353 (ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕರ ಮೇಲೆ ಹಲ್ಲೆ) ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತಮ್ಮ ನೂತನ ಟೆಂಪೋ ಟ್ರಾವೆಲ್ ʼನೆಪೋಲಿಯನ್ʼ ಅನ್ನು ಆರ್ಟಿಒ ಅಧಿಕಾರಿಗಳು ಕೊಂಡೊಯ್ದಿರುವುದರ ಕುರಿತು ಸಾಮಾಜಿಕ ತಾಣದಲ್ಲಿ ಸಹೋದರರು ಮಾಹಿತಿ ನೀಡಿದ್ದರು. ಯೂಟ್ಯೂಬ್ ನಲ್ಲಿ ಅವರಿಗೆ 15 ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ ಗಳಿದ್ದಾರೆ.
"ಅವರು ನಮ್ಮೊಂದಿಗೆ ತೆರಿಗೆ ಕಟ್ಟಲು ಮತ್ತು ಅನುಮತಿ ಪತ್ರವನ್ನು ಹಾಜರುಪಡಿಸುವಂತೆ ಕೇಳಿಕೊಂಡರು. ನಾವು ಹಣ ನೀಡಿದ ಬಳಿಕ ಗಾಡಿ ಹಿಂದಿರುಗಿಸುತ್ತೇವೆ ಎಂದರು. ನಾವು ಅಕ್ಷಯ ಸೆಂಟರ್ ಗೆ ಹಣ ಪಾವತಿಸಲು ಹೋದಾಗ, ಈಗಿರುವ ಅನುಮತಿ ಪತ್ರ ಇನ್ನೂ ಒಂದೂವರೆ ತಿಂಗಳು ಚಲಾವಣೆಯಲ್ಲಿರುವುದಾಗಿ ತಿಳಿದು ಬಂತು. ಆದರೆ ಕೆಲವರು ನಮ್ಮ ಬಗ್ಗೆ ವದಂತಿಗಳನ್ನು ಹಬ್ಬಿಸಿದರು. ನಾವು ಕಣ್ಣುರು ಆರ್ಟಿಒಗೆ ತೆರಳಿ ಎಲ್ಲಾ ದಾಖಲೆ ಪತ್ರಗಳನ್ನು ನೀಡಿದಾಗ ಅವರು ವಾಹನವನ್ನು ಹಿಂದಿರುಗಿಸಿದರು. ಆದರೆ ನಾವು ವೀಡಿಯೋ ಮಾಡಲು ಪ್ರಾರಂಭಿಸಿದಾಗ ಮತ್ತೆ ನಮ್ಮ ವಾಹನವನ್ನು ಆರ್ಟಿಒ ವಶಕ್ಕೆ ಪಡೆದಿದ್ದು, ನಾವು ಇನ್ನೂ ಹಣ ಪಾವತಿಸಬೇಕಾಗಿದೆ ಎಂದು ಹೇಳಿದರು. ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸುತ್ತಿದ್ದಾರೆ. ವಾಹನ ನವೀಕರಣ ಮಾಡುವುದು ಅತೀದೊಡ್ಡ ತಪ್ಪೇ?" ಎಂದು ಎಬಿನ್ ವೀಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ನಾವು ಇನ್ನು ಮುಂದೆ ಯೂಟ್ಯೂಬ್ ನಲ್ಲಿ ವ್ಲಾಗಿಂಗ್ (vlogging) ಮಾಡುವುದಿಲ್ಲವೆಂದು ಶನಿವಾರ ಇನ್ ಸ್ಟಾಗ್ರಾಂ ಪೋಸ್ಟ್ ನ ಮೂಲಕ ಇ ಬುಲ್ ಜೆಟ್ ಸಹೋದರರು ದೃಢಪಡಿಸಿದ್ದಾರೆ. ಇವರು ತಮ್ಮಲ್ಲಿರುವ ವಾಹನವನ್ನು ಮನೆಯಂತೆಯೇ ಪರಿವರ್ತಿಸಿ ಹಲವು ಪ್ರದೇಶಗಳಿಗೆ ಪ್ರಯಾಣಿಸಿ ಅದನ್ನು ತಮ್ಮ ಯೂಟ್ಯೂಬ್ ಮೂಲಕ ಪ್ರಸಾರ ಮಾಡುತ್ತಿದ್ದರು.
ಕಾನೂನು ಉಲ್ಲಂಘಿಸಿ ತಮ್ಮಲ್ಲಿರುವ ವಾಹನವನ್ನು ನವೀಕರಣ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು asianetnews ವರದಿ ಮಾಡಿದೆ. 6,400ರೂ.ಯನ್ನು ನವೀಕರಣಕ್ಕಾಗಿಯೂ 42,000ರೂ,ಯನ್ನು ದಂಡವನ್ನಾಗಿಯೂ ಅವರು ಪಾವತಿಸಬೇಕಿದೆ ಎಂದು ವರದಿ ತಿಳಿಸಿದೆ.
ಇವರನ್ನು ಪೊಲೀಸರು ಬಂಧಿಸುತ್ತಿರುವ ದೃಶ್ಯ ಸಾಮಾಜಿಕ ತಾಣದಾದ್ಯಂತ ವೈರಲ್ ಆಗುತ್ತಿರುವ ಬೆನ್ನಲ್ಲೇ ಅಭಿಮಾನಿಗಳು ಸೇರಿದಂತೆ ಹಲವು ಯೂಟ್ಯೂಬ್ ತಾರೆಗಳು ಅವರ ಪರ ಧ್ವನಿ ಎತ್ತಿದ್ದಾರೆ ಮತ್ತು ಪೊಲೀಸರ ಕೃತ್ಯವನ್ನು ಖಂಡಿಸಿದ್ದಾರೆ.
Great things happening might be a happiness of #keralamvd #keralapolice
— SangeetSunil (@SangeetSunil1) August 9, 2021
#heartlesspeople
#ebulljet
Those who do good things are always suppressed
#keralapolice pic.twitter.com/XMBWYQYTcA